ವಿವಾಹವಾಗುವುದಾಗಿ ನಂಬಿಸಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಮದುವೆಯ ನೆಪದಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿರುವ ಕಾರಣ, ಈತ ಜಾಮೀನಿಗೆ ಅರ್ಹನಲ್ಲ ಎಂದು ನ್ಯಾಯಮೂರ್ತಿ ಯೋಗೇಶ್ ಖನ್ನಾ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರದ ಶಿಕ್ಷೆ) ಮತ್ತು 506 (ಅಪರಾಧದ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಕೈಲಾಶ್ ಎಂಬಾತನಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ.
ಶಾದಿ ಡಾಟ್ ಕಾಮ್ನಲ್ಲಿ ಈತ ಮಹಿಳೆಯನ್ನು ಸಂಪರ್ಕಿಸಿದ್ದ. ಮೊದಲೇ ಮದುವೆಯಾಗಿದ್ದರೂ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮಹಿಳೆಯನ್ನು ನಂಬಿಸಿದ್ದ. ತನ್ನ ಹೆಸರನ್ನು ವಿಶಾಲ್ ಎಂದು ಹೇಳಿಕೊಂಡಿದ್ದ. ಈತನ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಮಹಿಳೆ ಮದುವೆಯಾಗುತ್ತಾನೆ ಎಂದು ನಂಬಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದರು.
ಹೀಗೆ ಹಲವು ಬಾರಿ ನಡೆದ ನಂತರ ಆತ ಮೋಸಗಾರ, ಇದಾಗಲೇ ಮದುವೆಯಾಗಿದೆ ಎಂದು ಮಹಿಳೆಗೆ ತಿಳಿಯಿತು. ನಂತರ ತಾನು ಪತ್ನಿಗೆ ವಿಚ್ಛೇದನ ಕೊಟ್ಟಿರುವುದಾಗಿ ಸುಳ್ಳು ಹೇಳಿದ್ದ. ಆದರೆ ವಿಚ್ಛೇದನ ನೀಡಲಿಲ್ಲ ಎನ್ನುವುದೂ ಮಹಿಳೆಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದಾಗಿ ಆಕೆ ದೂರು ದಾಖಲು ಮಾಡಿದ್ದರು.
ದೂರು ದಾಖಲಾದ ತಕ್ಷಣ ಪೊಲೀಸರು ತನ್ನನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆತ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆದರೆ ಈ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.