ಮೈಸೂರು: ಮೈಸೂರು ದಸರಾ ಮುಗಿದು 23 ದಿನಗಳಾಗಿವೆ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕ ಕೊಡದೇ ಓಡಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಲಕ್ಷ್ಮಣ್, ದಸರಾಗೆ ಪ್ರಾಯೋಜಕತ್ವದಿಂದಲೇ ಕೋಟ್ಯಂತರ ರೂ. ಬಂದಿದೆ. ಅದೆಲ್ಲಾ ಎಲ್ಲಿ ಹೋಯಿತು? ಯುವ ಸಂಭ್ರಮಕ್ಕೆ ಬಂದ ನಟ – ನಟಿಯರು ತಮ್ಮ ಸಿನಿವಾ ಪ್ರಮೋಷನ್ ಮಾಡಿದರು. ಆದರೂ ಅವರಿಗೆ ಲಕ್ಷ ಲಕ್ಷ ರೂ. ನೀಡಲಾಗಿದೆ. ಮನೆ ಮನೆ ದಸರಾಗೆ ವಾರ್ಡ್ಗೆ 2 ಲಕ್ಷ ರೂ. ಕೊಟ್ಟಿದ್ದೀರಿ. ಎಷ್ಟು ವಾರ್ಡ್ಗಳಲ್ಲಿ ದಸರಾ ಮಾಡಿದ್ದಾರೆ ಲೆಕ್ಕ ಕೊಡಿ? ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ರಾಜ್ಯ ಸರ್ಕಾರ, ಸಿಎಂ ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ ನಡೆಸಿದ ಲಕ್ಷ್ಮಣ್, ರಾಜ್ಯದಲ್ಲಿ ಸರ್ಕಾರ ಇದೆಯೇ? 34 ಸಚಿವರಲ್ಲಿ 26 ಸಚಿವರಿದ್ದಾರೆ. ಯಾವುದೇ ಇಲಾಖೆಗಳಿಗೂ ಸರಿಯಾಗಿ ನ್ಯಾಯ ಒದಗಿಸಲಾಗುತ್ತಿಲ್ಲ. 8 ಸಚಿವಾಲಯಗಳು ಖಾಲಿ ಇವೆ. ಬೊವ್ಮಾಯಿ ಮುಖ್ಯಮಂತ್ರಿ ಆದ ಮೇಲೆ 12 ಖಾತೆಗಳು ಅವರ ಬಳಿಯೇ ಇವೆ. 37 ಇಲಾಖೆಗಳನ್ನು ಸಿಎಂ ಸೇರಿ 5 ಮಂದಿ ಸಚಿವರು ಮಾತ್ರ ನಿರ್ವಹಿಸುತ್ತಿದ್ದಾರೆ. ಇದು ಕರ್ನಾಟಕದ ದುರಂತವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.