ಮಡಿಕೇರಿ: ರಾಜ್ಯದ ಎಲ್ಲಾ ಅರೇಬಿಕ್ ಶಾಲೆಗಳ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಅಂತಹ ಶಾಲೆಗಳ ಬೋಧನೆ ಕುರಿತು ವರದಿ ಕೇಳಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 106 ಅನುದಾನಿತ ಮತ್ತು 80 ಅನುದಾನ ರಹಿತ ಶಾಲೆಗಳಿದ್ದು, ಶಿಕ್ಷಣ ಇಲಾಖೆಯ ಪಠ್ಯಕ್ರಮದ ರೀತಿಯಲ್ಲಿ ಬೋಧನೆ ನಡೆಯುತ್ತಿಲ್ಲ ಎನ್ನುವ ಆರೋಪಗಳಿದ್ದು, ಈ ಕುರಿತಾಗಿ ಪರಿಶೀಲನೆ ನಡೆಸಲಾಗುವುದು ಎಂದರು.
ಬಹುತೇಕ ಅರೇಬಿಕ್ ಶಾಲೆಗಳಲ್ಲಿ ಭಾಷೆ, ವಿಜ್ಞಾನದ ಬಗ್ಗೆ ಕಲಿಕೆ ನಡೆಯುತ್ತಿಲ್ಲ. ಈ ಶಾಲೆಗಳಿಗೆ ಪ್ರತಿವರ್ಷ ಸುಮಾರು 27 ಸಾವಿರ ಮಕ್ಕಳು ಸೇರುತ್ತಾರೆ. ಆದರೆ, ಎಸ್ಎಸ್ಎಲ್ಸಿಗೆ ಬರುವೆ ವೇಳೆಗೆ ಕೇವಲ 2 ಸಾವಿರ ಮಕ್ಕಳಷ್ಟೇ ಇರುತ್ತಾರೆ. ಶಾಲೆಗಳಿಗೆ ದಾಖಲಾಗುವ ಮತ್ತು ಹಾಜರಾಗುವವರ ಸಂಖ್ಯೆಯಲ್ಲಿ ಭಾರಿ ವ್ಯತ್ಯಾಸವಿದ್ದು, ನಿರ್ದಿಷ್ಟ ಧರ್ಮದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಈ ರೀತಿ ಆಗಬಾರದು. ಎಲ್ಲಾ ಮಕ್ಕಳಿಗೂ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ವರದಿ ಕೇಳಲಾಗಿದೆ. ಪಠ್ಯಕ್ರಮದ ಅನುಸಾರ ಬೋಧನೆ ನಡೆಯುತ್ತಿಲ್ಲ ಎನ್ನುವ ಆರೋಪದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.