ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ವಿಚಿತ್ರ ಸಂಗತಿಗಳನ್ನೆಲ್ಲ ಯುವಜನತೆ ಅನುಸರಿಸೋದು ಕಾಮನ್ ಆಗ್ಬಿಟ್ಟಿದೆ. ಅದೇ ರೀತಿ ವೈರಲ್ ಆಗಿರೋ ಫೈರ್ ಹೇರ್ ಕಟ್ ಮಾಡಿಸಲು ಹೋಗಿ ಗುಜರಾತ್‌ನಲ್ಲಿ ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ.
ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದ ಸಲೂನ್‌ನಲ್ಲಿ 18 ವರ್ಷದ ಯುವಕನಿಗೆ ಈ ಫೈರ್ ಹೇರ್ ಕಟ್ ಮಾಡಲಾಯ್ತು. ಈ ವೇಳೆ ಆತನಿಗೆ ಸುಟ್ಟ ಗಾಯಗಳಾಗಿವೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಷೌರಿಕ ಕೂದಲಿಗೆ ಬೆಂಕಿ ಹಚ್ಚಿದ್ದು, ಅದು ನಿಯಂತ್ರಣ ತಪ್ಪಿದ್ದರಿಂದ ಯುವಕ ಗಾಯಗೊಂಡಿದ್ದಾನೆ. ಫೈರ್ ಹೇರ್ಕಟ್ ಇಂಟರ್ನೆಟ್‌ನಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಸ್ಟೈಲಿಂಗ್. ಇದರಲ್ಲಿ ಬೆಂಕಿಯನ್ನು ಬಳಸಿ ಗ್ರಾಹಕರಿಗೆ ಕೇಶ ವಿನ್ಯಾಸ ಅಥವಾ ಹೇರ್ ಕಟಿಂಗ್ ಮಾಡಲಾಗುತ್ತದೆ.
ಅದೇ ರೀತಿ ಈ ಯುವಕ ಕೂಡ ಟವೆಲ್‌ನಿಂದ ಮುಖ ಮುಚ್ಚಿಕೊಂಡು ಫೈರ್ ಹೇರ್‌ಕಟ್ ಮಾಡಿಸಿಕೊಳ್ಳಲು ಕುಳಿತಿದ್ದ. ಒಂದು ಕೈಯಲ್ಲಿ ಬಾಚಣಿಗೆ ಮತ್ತು ಇನ್ನೊಂದು ಕೈಯಲ್ಲಿ ಬೆಂಕಿಕಡ್ಡಿ ಹಿಡಿದ ಕ್ಷೌರಿಕ, ಕೂದಲಿಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಬೆಂಕಿ ಪೂರ್ತಿಯಾಗಿ ಆವರಿಸಿಕೊಂಡು ಬಿಟ್ಟಿದೆ. ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.
ಕಟಿಂಗ್ ಮಾಡಲು ಯುವಕನ ತಲೆಗೆ ಕೆಲವೊಂದು ಕೆಮಿಕಲ್‌ಗಳನ್ನೂ ಹಚ್ಚಲಾಗಿತ್ತು. ಪರಿಣಾಮ ಬೆಂಕಿ ತೀವ್ರಗೊಂಡಿದ್ದು, ಯುವಕನ ತಲೆ ಸುಟ್ಟು ಹೋಗಿದೆ. ಗಾಯಾಳುವನ್ನು ವಲ್ಸಾದ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸೂರತ್‌ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಫೈರ್ ಹೇರ್ ಕಟ್‌ಗೆ ಬಳಸಿದ ಕೆಮಿಕಲ್ ಯಾವುದು ಎಂಬುದನ್ನು ಸಹ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.