ಬಿಸಿಸಿಐನಲ್ಲಿ ವೇತನ ತಾರತಮ್ಯ ಇಂದು ನಿನ್ನೆಯದಲ್ಲ. ಮಹಿಳಾ ಕ್ರಿಕೆಟಿಗರನ್ನು ಬಿಸಿಸಿಐ ಕಡೆಗಣಿಸುತ್ತಲೇ ಬಂದಿದೆ. ಸಮಾನ ವೇತನಕ್ಕಾಗಿ ಮಹಿಳಾ ಕ್ರಿಕೆಟರ್‌ಗಳು ಆಗಾಗ ಧ್ವನಿಯೆತ್ತುತ್ತಲೇ ಇದ್ದರು. ಕೊನೆಗೂ ಬಿಸಿಸಿಐ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಮಹಿಳಾ ಕ್ರಿಕೆಟರ್‌ಗಳಿಗೂ ಪುರುಷ ಕ್ರಿಕೆಟರ್‌ಗಳಷ್ಟೇ ವೇತನ ನೀಡಲು ನಿರ್ಧರಿಸಿದೆ. ಮಹಿಳಾ ಮತ್ತು ಪುರುಷ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ.
“ತಾರತಮ್ಯವನ್ನು ಎದುರಿಸಲು BCCI ಮೊದಲ ಹೆಜ್ಜೆ ಇಟ್ಟಿದೆ, ಈ ಬಗ್ಗೆ ಘೋಷಣೆ ಮಾಡಲು ನನಗೆ ಸಂತೋಷವಾಗ್ತಿದೆ. ನಾವು ನಮ್ಮ ಒಪ್ಪಂದಕ್ಕೆ ಒಳಪಡುವ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ನಾವು ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆʼʼಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.