ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಕೂಡಲೇ 1984 ರ ಸಿಖ್ ಗಲಭೆ ಆರೋಪಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್ ನಲ್ಲಿ ಬದಲಾವಣೆಯ ನಡುವೆ 1984 ರ ಸಿಖ್ ವಿರೋಧಿ ದಂಗೆಯ ಆರೋಪಿ ಜಗದೀಶ್ ಟೈಟ್ಲರ್ ಅವರನ್ನು ಬೆಂಬಲಿಸುವ ತನ್ನ ನೀತಿಯನ್ನು ಪಕ್ಷವು ಮುಂದುವರೆಸಿದೆ ಎಂದು ಬಿಜೆಪಿ ಆರೋಪಿಸಿದೆ.
ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಬಗ್ಗಾ ಅವರು, ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ವಹಿಸಿಕೊಂಡಾಗ ರಾಷ್ಟ್ರ ರಾಜಧಾನಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಟೈಟ್ಲರ್ ಹಾಜರಿದ್ದರು ಎಂದು ಹೇಳಿದ್ದಾರೆ.
ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮೀರಾ ಕುಮಾರ್ ಟೈಟ್ಲರ್ ಒಂದೇ ಕೋಣೆಯಲ್ಲಿ ಕುಳಿತಿರುವ ಫೋಟೋವನ್ನು ಪೋಸ್ಟ್ ಮಾಡಿದ ಅವರು, ಸಿಖ್ಖರ ಕೊಲೆಗಾರರ ಮೇಲಿನ ಪ್ರೀತಿ ಇದು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಮಾರಂಭಕ್ಕೆ ಟೈಟ್ಲರ್ ಅವರನ್ನು ಆಹ್ವಾನಿಸಿದ್ದಕ್ಕಾಗಿ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು. ಖರ್ಗೆ ಅವರ ಪ್ರಮಾಣ ವಚನ ಸಮಾರಂಭಕ್ಕೆ ಸಿಖ್ ಹಂತಕ ಟೈಟ್ಲರ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಸುವ ಮೂಲಕ ಟೈಟ್ಲರ್ ಮತ್ತು ಕಮಲ್ ನಾಥ್ ಅವರಂತಹವರಿಗೆ ಭದ್ರತೆ ಮತ್ತು ಗೌರವವನ್ನು ನೀಡುವುದನ್ನು ಗಾಂಧಿ ಕುಟುಂಬವು ಮತ್ತೆ ಸಾಬೀತುಪಡಿಸಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ನ ಹಿರಿಯ ನಾಯಕರಾಗಿರುವ ಟೈಟ್ಲರ್ ಈ ಹಿಂದೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1984 ರ ಸಿಖ್ ವಿರೋಧಿ ದಂಗೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಅವರು ಕಳೆದ ಮೂರು ದಶಕಗಳಿಂದ ಆರೋಪ ಎದುರಿಸುತ್ತಿದ್ದಾರೆ.
ನಾನಾವತಿ ಆಯೋಗವು ಗಲಭೆಯಲ್ಲಿ ಅವರ ಪಾತ್ರದ ಬಗ್ಗೆ ಸುಳಿವು ನೀಡಿದ್ದರೂ, ನಂತರದ ಕಾಂಗ್ರೆಸ್ ಸರ್ಕಾರಗಳು ಅವರ ವಿರುದ್ಧ ಆರೋಪ ಹೊರಿಸುವ ಒಲವನ್ನು ತೋರಿಸಲಿಲ್ಲ. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದ ನಂತರ ಅವರು ಸಚಿವರಾಗಿದ್ದರು.
ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ ಸಿಬಿಐ ಟೈಟ್ಲರ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಸೆಷನ್ಸ್ ನ್ಯಾಯಾಲಯವು ವರದಿಯನ್ನು ತಿರಸ್ಕರಿಸಿತು. ಅವರ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಿತ್ತು.