ಹೈದರಾಬಾದ್: ತೆಲಂಗಾಣದಲ್ಲಿ ಟಿ.ಆರ್.ಎಸ್. ಶಾಸಕರಿಗೆ ತಲಾ 100 ಕೋಟಿ ರೂ. ಕೊಟ್ಟು ಬಿಜೆಪಿ ಖರೀದಿಗೆ ಯತ್ನಿಸಿದೆ ಎಂದು ಆರೋಪಿಸಿ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ನಾಯಕರು ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು,
ಟಿ.ಆರ್.ಎಸ್. ಶಾಸಕರನ್ನು ಖರೀದಿಸಲು ಬಿಜೆಪಿಯ ಯತ್ನಿಸಿದೆ ಎಂದು ದೂರಿದ ಪ್ರತಿಭಟನಾಕಾರರು ವಿಜಯವಾಡ ಹೆದ್ದಾರಿಯ ಹೈದರಾಬಾದ್ ಬಳಿಯ ಚೌಟುಪ್ಪಲ್ ನಲ್ಲಿ ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಸಚಿವರಾದ ಗಂಗೂಲ ಕಮಲಾಕರ್ ಮತ್ತು ಇಂದ್ರಕರನ್ ರೆಡ್ಡಿ ಭಾಗವಹಿಸಿದ್ದರು.
ಪ್ರತಿಭಟನಾಕಾರರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಸರಿ ಪಕ್ಷವು ತನ್ನ ಶಾಸಕರನ್ನು ಹಣ ಮತ್ತು ಹುದ್ದೆಯ ಆಫರ್ ಗಳ ಮೂಲಕ ಆಮಿಷವೊಡ್ಡುವ ಮೂಲಕ ಟಿಆರ್‌ಎಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಇತರ ಜಿಲ್ಲೆಗಳಲ್ಲಿ ಆಡಳಿತ ಪಕ್ಷದ ನಾಯಕರು ಇದೇ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಟಿ.ಆರ್.ಎಸ್. ನಾಲ್ವರು ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದಾಗ ಮೂವರನ್ನು ಹಿಡಿದಿರುವುದಾಗಿ ಪೊಲೀಸರು ಹೇಳಿದ್ದರು.
ನಗರದ ಹೊರವಲಯದ ಅಜೀಜ್ ನಗರದಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಾಲ್ವರು ಶಾಸಕರಿಗೆ ಹಣ ನೀಡುತ್ತಿದ್ದ ವೇಳೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಶಾಸಕರು ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ. 100 ಕೋಟಿ ಡೀಲ್ ಆಗಿರಬಹುದು ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಹೇಳಿದ್ದಾರೆ.
ಟಿಆರ್‌ಎಸ್ ಶಾಸಕರಾದ ರೇಗಾ ಕಾಂತ ರಾವ್, ಗುವ್ವಾಲ ಬಾಲರಾಜು, ಬೀರಂ ಹರ್ಷವರ್ಧನ್ ರೆಡ್ಡಿ ಮತ್ತು ಪೈಲಟ್ ರೋಹಿತ್ ರೆಡ್ಡಿ ಅವರು ಪಕ್ಷ ಬದಲಾಯಿಸಲು ಆಮಿಷ ಒಡ್ಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
15 ಕೋಟಿ ರೂ. ಹಣದ ಸಮೇತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಆಪರೇಷನ್ ಕಮಲಕ್ಕೆ ಕೈಹಾಕಿದೆ ಎಂದು ವರದಿಯಾಗುತ್ತಲೇ TRS ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬಂಧಿತರು ದೆಹಲಿಯ ರಾಮಚಂದ್ರ ಭಾರತಿ ಅಲಿಯಾಸ್ ಎಸ್. ಸತೀಶ್ ಶರ್ಮಾ, ತಿರುಪತಿಯ ಸಿಂಹಯಾಜುಲು, ಹೈದರಾಬಾದ್ ಉದ್ಯಮಿ, ಕೇಂದ್ರ ಸಚಿವರ ಆಪ್ತ ನಂದಕುಮಾರ್ ಎಂದು ಹೇಳಲಾಗಿದೆ.