ದೀಪಾವಳಿ ಹಬ್ಬ ಮುಗಿದ ನಂತರ ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ಶ್ರೀಮನ್ನಾರಾಯಣ ಹಾಗೂ ತುಳಸಿಗೆ ಮದುವೆಯಾಯಿತು ಎಂಬ ನಂಬಿಕೆ ಪುರಾಣದ ಕಾಲದಿಂದಲೂ ಬೆಳೆದು ಬಂದಿದೆ.
ಅಲ್ಲದೇ, ನಾರಾಯಣನನ್ನು ಎಚ್ಚರಿಸುವ ದಿನವಿದು ಎಂದೂ ಕೂಡ ಹೇಳಲಾಗಿದ್ದು, ಮನೆಯಲ್ಲಿ ತುಳಸಿಯನ್ನು ಪೂಜಿಸಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ನಾರಾಯಣನಿಗೆ ತುಳಸಿ ಎಂದರೆ ಅಚ್ಚುಮೆಚ್ಚು. ಹಾಗಾಗಿ ತುಳಸಿ ಮಾಲೆಯನ್ನು ಧರಿಸಿರುವುದನ್ನು ಕಾಣಬಹುದು. ಸಮುದ್ರ ಮಂಥನದ ಸಮಯದಲ್ಲಿ ಶ್ರೀಮನ್ನಾರಾಯಣನಿಗೆ ಅಮೃತ ಕಳಸ ಸಿಗುತ್ತದೆ. ಅದನ್ನು ಕಂಡು ಆನಂದಭಾಷ್ಪದಿಂದ ಕಣ್ಣಂಚಿನಲ್ಲಿ ಬಂದ ಹನಿಯೊಂದು ಅಮೃತ ಕಳಸದಲ್ಲಿ ಬಿದ್ದು ತುಳಸಿ ಗಿಡವಾಯಿತು ಎಂದು ಹೇಳಲಾಗುತ್ತದೆ.
ತುಳಸಿ ಹಬ್ಬದಂದು ಹೆಣ್ಣುಮಕ್ಕಳು ಮನೆಯಲ್ಲಿ ವಿಶೇಷವಾಗಿ ಪೂಜೆ ಮಾಡುತ್ತಾರೆ. ಮನೆಯ ಮುಂದಿನ ತುಳಸಿ ಗಿಡಕ್ಕೆ ಹೂವು, ಬಾಳೆಕಂಬ ಮೊದಲಾದವುಗಳಿಂದ ಅಲಂಕರಿಸಿ ಪೂಜೆ ಮಾಡುತ್ತಾರೆ. ಸುಮಂಗಲಿಯರನ್ನು ಕರೆದು ಕುಂಕುಮ ಕೊಡುತ್ತಾರೆ. ದೀಪಾವಳಿಯಲ್ಲಿ ಉಳಿಸಿಕೊಂಡ ಪಟಾಕಿಗಳನ್ನು ಪುಟ್ಟ ಮಕ್ಕಳು ಹಚ್ಚುತ್ತಾರೆ. ತುಳಸಿ ಪೂಜೆ ಮಾಡಿದರೆ ವಿಶೇಷ ಪುಣ್ಯ ಬರುತ್ತದೆ ಎಂಬ ನಂಬಿಕೆ ಇದೆ.