ಕಾನ್ಪುರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವಾಗ ನಿಮ್ಮ ಮನೆಯವರಿಗೆ ತೋರಿಸುತ್ತೇನೆ ಎಂದು ಪತಿ ವಿಡಿಯೋ ಚಿತ್ರೀಕರಿಸಿದ ಘಟನೆ ಕಾನ್ಪುರದ ಹನುಮಂತ್ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತ್ನಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗುಲ್ಮೊಹರ್ ವಿಹಾರ್ ನಿವಾಸಿ ಸಂಜೀವ್ ಗುಪ್ತಾ ವಿಡಿಯೋ ಚಿತ್ರೀಕರಿಸಿದ ಪತಿ. ಅವರು ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ.
ಐದು ವರ್ಷಗಳ ಹಿಂದೆ ಕಿದ್ವಾಯಿ ನಗರದ ಶೋಭಿತಾ ಗುಪ್ತಾ ಅವರನ್ನು ವಿವಾಹವಾಗಿದ್ದ ಅವರಿಗೆ ಎರಡೂವರೆ ವರ್ಷದ ಮಗಳಿದ್ದಾಳೆ. ಸಂಜೀವ್ ಪ್ರಕಾರ, ಸೋಮವಾರದಂದು ದಂಪತಿ ಜಗಳವಾಡಿದಾಗ ಘಟನೆ ಸಂಭವಿಸಿದೆ.
ಶೋಭಿತಾ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿದ್ದಾಗ ವೈರಲ್ ಆಗಿರುವ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಸಂಜೀವ್ ಪೊಲೀಸರಿಗೆ ತಿಳಿಸಿದ್ದಾರೆ. ಜಗಳದ ವೇಳೆ ದಂಪತಿ ಟೆರೇಸ್ ಗೆ ಹೋಗಿದ್ದು, ಅಲ್ಲಿ ಅವರು ಮತ್ತೆ ಜಗಳವಾಡಿದ್ದಾರೆ. ಸ್ವಲ್ಪ ಸಮಯದ ನಂತರ ಶೋಭಿತಾ ಕೆಳಗೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಕೆಳಗೆ ಬಂದ ಸಂಜೀವ್ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಸಂಜೀವ್ ಅವರಿಂದ ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಪ್ರಕರಣದಲ್ಲಿ ಯಾರ ವಿರುದ್ಧವೂ ದೂರು ದಾಖಲಾಗಿಲ್ಲ. ಯಾವುದೇ ದೂರು ಬಂದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಗೋವಿಂದ್ ನಗರ ಎಸಿಪಿ ವಿಕಾಸ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಏತನ್ಮಧ್ಯೆ, ವಿಡಿಯೋ ಹೊರಬಂದ ನಂತರ, ಶೋಭಿತಾ ಕುಟುಂಬ ಸದಸ್ಯರು ಆಕೆಯನ್ನು ಕೊಂದು ನಂತರ ಸಂಜೀವ್ ಶವಕ್ಕೆ ನೇಣು ಹಾಕಿದ್ದಾರೆ ಎಂದು ಆರೋಪಿಸಿದರು.