ಲಂಡನ್: ಭಾರತದ ಜತೆ ನಿಕಟ ಸಂಬಂಧ ಹೊಂದಿರುವ ರಿಷಿ ಸುನಕ್ ಅವರನ್ನು ಇಂಗ್ಲೆಂಡ್ನ ಹೊಸ ಪ್ರಧಾನಿಯಾಗಿ ನೇಮಿಸಲಾಗಿದ್ದು, ಈ ಹುದ್ದೆ ಏರಿದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಿ ಇತಿಹಾಸವನ್ನು ಬರೆದಿದ್ದಾರೆ.
ಒಂದೆಡೆ, ಹೊಸ ಪ್ರಧಾನಿಗೆ ಶುಭಾಶಯಗಳು ಹರಿದುಬರುತ್ತಿದ್ದಂತೆ, ಇನ್ನೊಂದೆಡೆ ಲ್ಯಾರಿ ಎಂಬ ಬೆಕ್ಕು ಈ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಪ್ರಧಾನಿಯ ಸ್ಥಾನ ಅಲಂಕರಿಸುತ್ತಿದ್ದಂತೆಯೇ ರಿಷಿ ಸುನಕ್ ಅವರು ವೇದಿಕೆಯಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದಲ್ಲಿಯೇ ಕುಳಿತ ಅವರ ಬೆಕ್ಕು ಭಾಷಣ ಆಲಿಸುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಭಾಷಣದ ಸಮಯದಲ್ಲಿ ಬೆಕ್ಕು ಬೀದಿ ದೀಪದ ಬಳಿ ಕುಳಿತಿದೆ. ಲ್ಯಾರಿ ದಿ ಕ್ಯಾಟ್ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ನೂತನ ಪ್ರಧಾನಿಗೆ ಬೆಕ್ಕೇ ಶುಭಾಶಯ ಹೇಳುವಂತೆ ಬರೆಯಲಾಗಿದೆ.
ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ಈ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದು, ಕೆಲವೊಂದು ಹಾಸ್ಯದ ತುಣುಕುಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ. ಈಗ ನನ್ನ ಹಳೆಯ ಸ್ನೇಹಿತನಿಗೆ ಉತ್ತಮ ಹುದ್ದೆ ಸಿಕ್ಕಿದೆ ಎಂದು ಬೆಕ್ಕು ಹೇಳುವಂತೆ ಶೇರ್ ಮಾಡಲಾಗಿದ್ದು, ಇದು ನೆಟ್ಟಿಗರನ್ನು ನಕ್ಕು ನಲಿಸುತ್ತಿದೆ.
ಅಂದಹಾಗೆ, ರಿಷಿ ಸುನಕ್ ಅವರು, ರಾಣಿ ಎಲಿಜಬೆತ್ II ಕಳೆದ ತಿಂಗಳು ನಿಧನರಾದ ನಂತರ ಹೊಸ ರಾಜ ಕಿಂಗ್ ಚಾರ್ಲ್ಸ್ III ರಿಂದ ನೇಮಕಗೊಂಡ ಮೊದಲ ಪ್ರಧಾನಿಯಾಗಿದ್ದಾರೆ.