
ಮನೆಯಲ್ಲಿ ಚಿಕ್ಕಮಗುವಿನ ಆಗಮನ ಆಗುತ್ತಿದೆ ಎಂದರೆ ಮನೆಯವರಿಗೆಲ್ಲರೂ ತುಂಬ ಸಂಭ್ರಮ. ಅದರಲ್ಲಿಯೂ ಮನೆಯಲ್ಲಿರುವ ಮಕ್ಕಳಿಗೆ ತಮಗೆ ತಮ್ಮನೋ, ತಂಗಿನೋ ಬರುತ್ತಿದ್ದಾರೆ ಎಂದರೆ ಅವರಿಗೆ ಮತ್ತಷ್ಟು ಖುಷಿಯೋ ಖುಷಿ. ತಮ್ಮ ಜತೆ ಆಡಲು ಫ್ರೆಂಡ್ಸ್ ಸಿಗುತ್ತಿದ್ದಾರೆ ಎನ್ನುವ ಸಂತಸ.
ಈ ಸಂತಸದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಸಂತಸಕ್ಕೆ ಕಾರಣವಾಗಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರಾದ ಲಾರಾ ಹೆಸ್ ಮತ್ತು ಪೇಜ್ ದಿ ಡೈಲಿ ಹಾರ್ಟ್‌ವಾರ್ಮಿಂಗ್ ಜಂಟಿಯಾಗಿ ಹಂಚಿಕೊಂಡಿರುವ ಈ ಭ್ರಾತೃತ್ವ ವಿಡಿಯೋಗೆ ನೆಟ್ಟಿಗರು ಶುಭಾಶಯಗಳ ಸುರಿಮಳೆಯನ್ನೇಗೈದಿದ್ದಾರೆ.
ಅಸಲಿಗೆ ಈ ವಿಡಿಯೋದಲ್ಲಿ ಇರುವುದೇನೆಂದರೆ, ಜೈಡೆನ್ ಎಂಬ ಬಾಲಕ ತನ್ನ ಮನೆಗೆ ಬಂದಿರುವ ಪುಟ್ಟ ಪಾಪುವಿಗೆ ಏನಾದರೂ ಉಡುಗೊರೆ ಕೊಡಲು ಬಯಸಿದ್ದಾನೆ. ಅದನ್ನು ಹೇಗೆ ಕೊಡಲಿ ಎಂದು ಆತ ಆಸ್ಪತ್ರೆಯಲ್ಲಿರುವ ಅಮ್ಮನಿಗೆ ಕೇಳಿದ್ದಾನೆ. ನಂತರ ನಿನ್ನ ತಮ್ಮ ಇಲ್ಲೇ ಇದ್ದಾನೆ, ಕೊಡು ಎಂದು ತಾಯಿ ಹೇಳಿದ್ದಾಳೆ.
ಕೂಡಲೇ ತನ್ನ ಜೇಬಿನಲ್ಲಿರುವ ಸ್ಟಿಕ್ಕರ್ ಒಂದನ್ನು ಹೊರತೆಗೆದು ಮಗುವಿನ ಮುಖದ ಮೇಲೆ ಇಡಲು ಬಾಲಕ ಪ್ರಯತ್ನಿಸುತ್ತಾನೆ. ನಂತರ, ತಾಯಿ ಅದನ್ನು ಅವನ ಬಟ್ಟೆಗೆ ಹಾಕಲು ಹೇಳುತ್ತಾಳೆ. ಬಟ್ಟೆಗೆ ಸ್ಕಿಕ್ಕರ್ ಅಂಟಿಸಿದ ಬಾಲಕ ನಂತರ ತಮ್ಮನ ಹಣೆಗೆ ಮುತ್ತಿಟ್ಟು, “ನಾನು ಅವನನ್ನು ಇಷ್ಟಪಡುತ್ತೇನೆ” ಎಂದು ಪಿಸುಗುಟ್ಟುತ್ತಾನೆ.
ಬಾಲಕನ ತಂದೆ ವಿಡಿಯೋ ಮಾಡಿದ್ದು ಅದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಇದೀಗ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.