ನವದೆಹಲಿ: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆ ಹಾಗೂ ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರ ವಿಚಾರಣೆ ನಡೆಸಲಾಗಿದೆ.
ರಾಷ್ಟ್ರೀಯ ತನಿಖಾ ದಳದ(NIA) ಅಧಿಕಾರಿಗಳು ಗಾಯಕಿ ಅಫ್ಸಾನಾ ಖಾನ್ ವಿಚಾರಣೆ ನಡೆಸಿದ್ದಾರೆ. ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಗ್ರಿಲ್ ಮಾಡಲಾಗಿದೆ.
ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಮಿನಲ್ ಗ್ಯಾಂಗ್ ಗಳನ್ನು ಒಳಗೊಂಡ ಎರಡು ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಹಿಸಿಕೊಂಡ ನಂತರ, ಪಂಜಾಬಿ ಗಾಯಕಿ ಅಫ್ಸಾನಾ ಖಾನ್ ಅವರನ್ನು ಮಂಗಳವಾರ ವಿಚಾರಣೆಗೆ ಕರೆಸಲಾಯಿತು.
ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಆಪ್ತ ಸ್ನೇಹಿತೆ ಅಫ್ಸಾನಾ ಖಾನ್ ನವದೆಹಲಿಯಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯಲ್ಲಿ ತನ್ನ ಹೇಳಿಕೆ ದಾಖಲಿಸಿದ್ದಾರೆ. ಮೇ 29, 2022 ರಂದು ಸಾಯುವ ಮೊದಲು ಕಲಾವಿದ ಬಿಡುಗಡೆ ಮಾಡಿದ ಅಂತಿಮ ವಿಡಿಯೊದಲ್ಲಿ ಸಿಧು ಮೂಸೆವಾಲಾ ಅವರೊಂದಿಗೆ ಅಫ್ಸಾನಾ ಖಾನ್ ಕಾಣಿಸಿಕೊಂಡಿದ್ದರು.
ಮೇ 29 ರಂದು ಪಂಜಾಬ್ ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಖ್ಯಾತ ಗಾಯಕ ಸಿಧು ಮೂಸ್ ವಾಲಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ಪಂಜಾಬ್ ಪೊಲೀಸರು ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಹತ್ಯೆ ನಡೆದಿತ್ತು.