ಇಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಈಗಾಗಲೇ ಆರಂಭವಾಗಿದ್ದು, ಭಾರತದ ಹಲವೆಡೆ ಭಾಗಶಃ ಗೋಚರವಾಗುತ್ತಿದೆ. ಈ ಗ್ರಹಣ ಕೆಲವರ ರಾಶಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದರ ಮಧ್ಯೆ, ಬರಿಗಣ್ಣಿನಲ್ಲಿ ಗ್ರಹಣ ವೀಕ್ಷಿಸಬಾರದು ಎಂದು ವಿಜ್ಞಾನಿಗಳು ಹೇಳಿರುವ ಕಾರಣ ಬಹಳಷ್ಟು ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಅಲ್ಲದೆ ದೀಪಾವಳಿ ರಜೆಯೂ ಇರುವ ಕಾರಣ ಬಹುತೇಕರು ಮನೆಗಳಲ್ಲಿಯೇ ಕಾಲ ಕಳೆಯುತ್ತಿದ್ದು, ಬಹಳಷ್ಟು ರಸ್ತೆಗಳು ಬಿಕೋ ಎನ್ನುತ್ತಿವೆ. ಇದರ ಪರಿಣಾಮ ಹೋಟೆಲ್ ಗಳು ಖಾಲಿ ಹೊಡೆಯುತ್ತಿದ್ದು, ಬಸ್ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇದೆ. ಸಿನಿಮಾ ವೀಕ್ಷಿಸಲು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿಲ್ಲ.
ಇನ್ನು ಗ್ರಹಣ ಕಾಲದಲ್ಲಿ ಊಟ ಉಪಹಾರ ಸೇವಿಸಬಾರದು ಎಂಬ ಕಾರಣಕ್ಕೆ ಹೋಟೆಲ್ ಗಳು ಖಾಲಿ ಹೊಡೆಯುತ್ತಿವೆ ಎನ್ನಲಾಗಿದ್ದು, ಗ್ರಹಣ ಮುಗಿದ ಬಳಿಕವಷ್ಟೇ ವ್ಯಾಪಾರ ಎಂದಿನಂತೆ ನಡೆಯಬಹುದು ಎಂದು ಹೇಳಲಾಗಿದೆ. ಗ್ರಹಣವಿದ್ದ ಕಾರಣ ಹೋಟೆಲ್ಗಳಲ್ಲಿ ಕಡಿಮೆ ಆಹಾರ ಪದಾರ್ಥ ಸಿದ್ಧಪಡಿಸಿಟ್ಟುಕೊಂಡಿದ್ದರೂ ಸಹ ಅದೂ ಸಹ ಉಳಿದಿದೆ ಎಂಬ ಮಾತುಗಳು ಕೆಲ ಹೋಟೆಲ್ ಮಾಲೀಕರಿಂದ ಕೇಳಿ ಬಂತು.