ಅತಿ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣ ವಾಟ್ಸಾಪ್ ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಟೆಗಳ ಕಾಲ ಇಂದು ಡೌನ್ ಆಗಿದೆ. ಅದರಲ್ಲೂ ಭಾರತದಲ್ಲಿ ಇಂದು ದೀಪಾವಳಿಯಾಗಿರುವ ಕಾರಣ ಆತ್ಮೀಯರಿಗೆ ಶುಭಾಶಯ ಸಂದೇಶ ಕಳುಹಿಸಲಾಗದೆ ಬಳಕೆದಾರರು ಪರದಾಡಿದ್ದಾರೆ.
ವಿಶ್ವದಾದ್ಯಂತ ಭಾರತೀಯ ಕಾಲಮಾನ ಅಂದಾಜು 12 ರಿಂದ 12-30 ರ ಸುಮಾರಿಗೆ ಸ್ಥಗಿತಗೊಂಡ ವಾಟ್ಸಾಪ್ ಸೇವೆ 1-30 ರಿಂದ 2-15 ರ ಬಳಿಕ ಮತ್ತೆ ಆರಂಭವಾಗಿದೆ. ವಾಟ್ಸಾಪ್ ಡೌನ್ ಆಗುತ್ತಿದ್ದಂತೆಯೇ ಬಳಕೆದಾರರು ಟ್ವಿಟರ್ ನಲ್ಲಿ ಈ ಕುರಿತು ದೂರುಗಳ ಸುರಿಮಳೆಯನ್ನೇ ಹರಿಸಿದ್ದಾರೆ.
ವಾಟ್ಸಾಪ್ ಈ ಹಿಂದೆಯೂ ಸಹ ಕೆಲವೊಮ್ಮೆ ಡೌನ್ ಆಗಿದ್ದು, ಆದರೆ ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಂಟೆಗಳ ಕಾಲ ಸೇವೆ ಸ್ಥಗಿತಗೊಂಡಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗುತ್ತಿದ್ದರೂ ಸಹ ವಿಶ್ವದಾದ್ಯಂತ ಏಕಕಾಲದಲ್ಲಿ ಇಷ್ಟು ದೀರ್ಘಕಾಲ ಸ್ಥಗಿತಗೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.