ಪ್ರಯಾಣಿಕರು ಚಲಿಸುವ ರೈಲಿನಿಂದ ಕೆಳಗೆ ಬಿದ್ದು ಅಪಾಯಕ್ಕೆ ಸಿಲುಕುವ ಅವಘಡಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಬಿಹಾರದ ಮುಜಾಫರ್ನಗರ ರೈಲು ನಿಲ್ದಾಣದಲ್ಲಿ ಶನಿವಾರ ಇಂತಹ ಘಟನೆ ನಡೆದಿದ್ದು, ಅದರ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ.
ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿಯೊಬ್ಬರು ಪ್ಲಾಟ್ಫಾರ್ಮ್ ಹಾಗೂ ರೈಲಿನ ನಡುವೆ ಸಿಕ್ಕಿಬಿದ್ದ ಬಿದ್ದ ಮಹಿಳೆಯ ಜೀವವನ್ನು ಉಳಿಸಿದ್ದಾರೆ.
ಅಂಬಿಶಾ ಖಾತೂನ್ ಎಂದು ಗುರುತಿಸಲಾದ ಮಹಿಳೆ ಚಲಿಸುತ್ತಿರುವ ಗ್ವಾಲಿಯರ್- ಬರೌನಿ ಎಕ್ಸ್ಪ್ರೆಸ್ ರೈಲಿನಿಂದ ಹೊರಬರುವುದನ್ನು ಕಾಣಬಹುದು. ಆಕೆ ದುರದೃಷ್ಟವಶಾತ್ ಪ್ಲಾಟ್ಫಾರ್ಮ್ ಮೇಲೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಆರ್ಪಿಎಫ್ ಅಧಿಕಾರಿ ಇದನ್ನು ಗಮನಿಸಿ ಓಡೋಡಿ ಬಂದು ಆಕೆಯನ್ನು ರಕ್ಷಿಸಿದ್ದಾರೆ.
ವಾಸ್ತವವಾಗಿ, ಅಂಬಿಶಾ ವಾಶ್ರೂಮ್ ಅನ್ನು ಬಳಸಲು ಬಯಸಿದ್ದರು ಆದರೆ ಪ್ಲಾಟ್ಫಾರ್ಮ್ 3ರಲ್ಲಿ ಶೌಚಾಲಯವಿರಲಿಲ್ಲ. ಈ ಮಧ್ಯೆ, ಗ್ವಾಲಿಯರ್- ಬರೌನಿ ಎಕ್ಸ್ಪ್ರೆಸ್ ನಿಲ್ದಾಣವನ್ನು ಪ್ರವೇಶಿಸಿತು. ರೈಲಿನ ಒಳಗಿರುವ ಶೌಚಾಲಯವನ್ನು ಉಪಯೋಗಿಸಲು ಆಕೆ ರೈಲು ಹತ್ತಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ರೈಲು ನಿಲ್ದಾಣದಿಂದ ಹೊರಟಿದೆ. ಹೀಗಾಗಿ ಗಾಬರಿಯಿಂದ ಇಳಿಯಲು ಪ್ರಯತ್ನಿಸಿದಾಗ ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಜಾರಿದ್ದರು.