
ಇಂದು ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಸಂಜೆ ಐದು ಗಂಟೆಯಿಂದ ರಾಜ್ಯದ ವಿವಿಧೆಡೆ ಇದು ಭಾಗಶಃ ಗೋಚರಿಸಲಿದೆ. ಈ ಗ್ರಹಣವನ್ನು ನೇರವಾಗಿ ವೀಕ್ಷಿಸುವುದು ಕಣ್ಣಿಗೆ ಅಪಾಯಕಾರಿ ಎಂದು ಈಗಾಗಲೇ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಗ್ರಹಣದ ಸಂದರ್ಭದಲ್ಲಿ ರಾಜ್ಯದ ಬಹುತೇಕ ದೇಗುಲಗಳು ಬಂದ್ ಆಗಲಿದ್ದು, ಹಾಸನದಲ್ಲಿ ಇಂದು ಹಾಸನಾಂಬೆಯ ದರ್ಶನ ಇರುವುದಿಲ್ಲ ಎಂದು ತಿಳಿಸಲಾಗಿದೆ. ಹಾಗೆಯೇ ಕುಕ್ಕೆ ಸುಬ್ರಹ್ಮಣ್ಯ, ಬೇಲೂರಿನ ಚೆನ್ನಕೇಶವ ದೇವಾಲಯ, ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯ, ಸಿಗಂದೂರೇಶ್ವರಿ ಸೇರಿದಂತೆ ಹಲವು ದೇವಾಲಯಗಳಿಗೆ ಭಕ್ತರಿಗೆ ಪ್ರವೇಶ ಇರುವುದಿಲ್ಲ.
ಇದರ ಮಧ್ಯೆಯೂ ಗ್ರಹಣ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಡುಗುಂಜಿ, ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ, ಉಡುಪಿಯ ಶ್ರೀ ಕೃಷ್ಣ ಮಂದಿರ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಮಂತ್ರಾಲಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಇರುವುದಿಲ್ಲ. ಪ್ರಸಾದ ಭೋಜನ ವ್ಯವಸ್ಥೆ ಕೂಡ ಇರುವುದಿಲ್ಲ ಎಂದು ತಿಳಿಸಲಾಗಿದೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಎಂದಿನಂತೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.