ದೀಪಾವಳಿ ಹಬ್ಬದ ದಿನದಂದೇ ಆಂಧ್ರಪ್ರದೇಶದ ಪಾರ್ವತಿಪುರ ಜಿಲ್ಲೆಯಲ್ಲಿ ಅವಘಡ ಒಂದು ಸಂಭವಿಸಿದ್ದು, ವಾಹನ ಶೋರೂಮ್ ಗೆ ಬೆಂಕಿ ತಗುಲಿದ ಪರಿಣಾಮ 36 ಎಲೆಕ್ಟ್ರಿಕ್ ಸ್ಕೂಟರ್ ಗಳು ಸುಟ್ಟು ಭಸ್ಮವಾಗಿವೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬೆಂಕಿ ಹೊತ್ತಿಕೊಳ್ಳಲು ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.
ಪಾರ್ವತಿಪುರ ಜಿಲ್ಲೆಯ ಪಲಕುಂಡ ನಗರದ ಮನಂ ಮೋಟರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿದ್ದ ಕಾರಣ ಸಾಕಷ್ಟು ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬ್ಯಾಟರಿಗಳನ್ನು ತರಿಸಲಾಗಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬಳಿಕ ಶೋರೂಂಗೆ ಆವರಿಸಿದೆ. ಇದರ ಪರಿಣಾಮ 36 ಎಲೆಕ್ಟ್ರಿಕ್ ಸ್ಕೂಟರ್ ಗಳು ಸುಟ್ಟು ಭಸ್ಮವಾಗಿದ್ದು ಅಂದಾಜು 50 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಹೇಳಲಾಗಿದೆ.
ಸ್ಕೂಟರ್ ಮತ್ತು ಬ್ಯಾಟರಿ ಇಟ್ಟಿದ್ದ ಸ್ಥಳದಲ್ಲಿಯೇ ಬೆಂಕಿ ಕಾಣಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಕಾರಣಕ್ಕೆ ಬೆಂಕಿ ತಗುಲಿರಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೆಂಕಿ ಹೊತ್ತಿಕೊಂಡಿರುವ ಹಲವು ಪ್ರಕರಣಗಳು ನಡೆದಿದ್ದು, ಇದರಿಂದ ಸಹಜವಾಗಿಯೇ ಗ್ರಾಹಕರಿಗೆ ಆತಂಕ ಉಂಟಾಗಿದೆ. ಆದರೆ ಸಂಪೂರ್ಣ ತನಿಖೆಯ ನಂತರವಷ್ಟೇ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ತಿಳಿದು ಬರಲಿದೆ.