ನರಕ ಚತುರ್ದಶಿಯ ಎರಡನೇ ದಿನ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 26ರಂದು ನಾಡಿನೆಲ್ಲೆಡೆ ಬಲಿಪಾಡ್ಯಮಿಯನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿ ಪೂಜೆಯನ್ನು ಭಕ್ತರು ಈ ದಿನ ಮಾಡ್ತಾರೆ. ನರಕ ಚತುರ್ದಶಿಯಂದು ಮನೆಗೆ ಬರುವ ಬಲೀಂದ್ರನನ್ನು ಮೂರು ದಿನ ಪೂಜೆ ಮಾಡಿ ಬಲಿ ಪಾಡ್ಯಮಿಯಂದು ಕಳುಹಿಸಲಾಗುತ್ತದೆ.
ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಬಲಿಪಾಡ್ಯಮಿ ಆಚರಿಸಲಾಗುತ್ತದೆ. ನೆಲದ ಮೇಲೆ ಬಲೀಂದ್ರದ ಚಿತ್ರ ಬಿಡಿಸಿ ಪೂಜೆ ಮಾಡುವವರೂ ಇದ್ದಾರೆ. ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ, ಸಿಹಿ ತಿಂಡಿ ಮಾಡಿ, ಮನೆ ತುಂಬ ದೀಪ ಬೆಳಗಿ ಬಲಿ ಚಕ್ರವರ್ತಿ ಪೂಜೆ ಮಾಡಲಾಗುತ್ತದೆ. ದೀಪಾವಳಿಯಲ್ಲಿ ಹೊಸ ಬಟ್ಟೆಯನ್ನು ಧರಿಸಿ ಎಲ್ಲರೂ ಖುಷಿಯಿಂದ ಹಬ್ಬ ಆಚರಿಸುತ್ತಾರೆ.
ದೀಪಾವಳಿಯಲ್ಲಿ ಗೋವುಗಳ ಪೂಜೆ ವಿಶೇಷ ಮಹತ್ವ ಪಡೆದಿದೆ. ಹಳ್ಳಿಗಳಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ, ಸಿಂಗಾರ ಮಾಡಿ ಪೂಜೆ ಮಾಡುತ್ತಾರೆ. ಮನೆಯ ಮುಖ್ಯ ದ್ವಾರಕ್ಕೆ ಗೋ ಹೆಜ್ಜೆಗಳನ್ನು ಬಿಡಿಸುತ್ತಾರೆ. ರಂಗೋಲಿ, ಕೆಮ್ಮಣ್ಣಿನಿಂದ ಮನೆಯನ್ನು ಸಿಂಗಾರ ಮಾಡುತ್ತಾರೆ. ಸೆಗಣಿಯ ಪರ್ವತ ಮಾಡಿ, ದೂರ್ವೆ ಹೂವುಗಳನ್ನು ಅಲ್ಲಲ್ಲಿ ಸಿಕ್ಕಿಸಿ, ಕೃಷ್ಣ, ಗೋಪಿಕೆ, ಹಸುಗಳ ಚಿತ್ರ ಬಿಡಿಸಿ ಪೂಜೆ ಮಾಡುವವರಿದ್ದಾರೆ. ಕಾರ್ತಿಕ ಶುದ್ಧ ಪಾಡ್ಯದ ದಿನದಂದು ಕೃಷ್ಣ ಗೋವರ್ದನ ಗಿರಿಯನ್ನು ಎತ್ತಿ ಹಿಡಿದು ಗೋಪಾಲರಿಗೆ ರಕ್ಷಣೆ ನೀಡಿದ ಎಂಬ ನಂಬಿಕೆಯಿದೆ. ಹಾಗಾಗಿ ಅಂದು ಗೋವುಗಳ ಪೂಜೆ ಮಾಡಲಾಗುತ್ತದೆ.