ಪ್ರತಿಸ್ಪರ್ಧಿ ಕಂಪೆನಿಗಳನ್ನು ಅಣಕಿಸುವುದು, ಕಾಲೆಳೆಯುವುದು ಸರ್ವೇ ಸಾಮಾನ್ಯ, ಅವು ಮಾಡುವ ತಪ್ಪುಗಳನ್ನು ಹುಡುಕುವಲ್ಲಿ ಉಳಿದ ಕಂಪನಿಗಳು ಕಾರ್ಯನಿರತವಾಗಿರುತ್ತವೆ ಎನ್ನುವುದು ಸುಳ್ಳಲ್ಲ. ಆದರೆ ಆಪಲ್ ಕಂಪೆನಿಯ ಸಿಇಒ ಅವರನ್ನು ಅಣಕಿಸಲು ಹೋಗಿ ಖುದ್ದು ಗೂಗಲ್ ಕಂಪೆನಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಆಗಿದ್ದೇನೆಂದರೆ, ಆಪಲ್ ಕಂಪನಿಯು ತನ್ನ ಹೊಸ M2 iPad Pro, iPad 10, ಮುಂದಿನ ಪೀಳಿಗೆಯ ಆಪಲ್ ಟಿವಿ 4K ಅನ್ನು ಅನಾವರಣಗೊಳಿಸುವ ಸಂಬಂಧ ಕೆಲವೊಂದು ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ.
ತನ್ನ ಹೊಸ ಉತ್ಪನ್ನಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಆಪಲ್ ಸಿಇಒ ಟಿಮ್ ಕುಕ್ ಅವರು ಟ್ವಿಟರ್‌ನಲ್ಲಿ #TakeNote ಹ್ಯಾಶ್‌ಟ್ಯಾಗ್ ಅನ್ನು ಪೋಸ್ಟ್ ಮಾಡಿದ್ದರು. ಅವರನ್ನು ಅಣಕಿಸಲು ಯತ್ನಿಸಿದ ಗೂಗಲ್ ಪಿಕ್ಸೆಲ್ನ ಅಮೆರಿಕದ ಖಾತೆಯು ಅದೇ #TakeNote ಹ್ಯಾಷ್ಟ್ಯಾಗ್ನೊಂದಿಗೆ ತನ್ನ ಕಂಪನಿಯ ಪ್ರಚಾರದಲ್ಲಿ ತೊಡಗಿಸಿಕೊಂಡಿತು. ಆದರೆ ಈ ತಮಾಷೆ ಅದಕ್ಕೆ ಬಲು ದುಬಾರಿಯಾಗಿ ಪರಿಣಿಸಿತು.
ಇದಕ್ಕೆ ಕಾರಣ ಏನೆಂದರೆ ಗೂಗಲ್ ಪಿಕ್ಸೆಲ್ ಈ ರೀತಿ ಟ್ವೀಟ್ ಮಾಡಿದ್ದು ಆಪಲ್ ಕಂಪೆನಿಯ ಐ-ಫೋನ್ನಿಂದಲೇ! ಟ್ವಿಟರ್‌ನಲ್ಲಿ ಅದು ಸ್ಪಷ್ಟವಾಗಿ ಗೋಚರಿಸುತ್ತಲೇ ಕಮೆಂಟಿಗರು ವಿವಿಧ ರೀತಿಯ ವಿರುದ್ಧ ಕಮೆಂಟ್ ಮಾಡಲು ಶುರು ಮಾಡಿದರು. ಎಡವಟ್ಟು ಗೊತ್ತಾಗುತ್ತಿದ್ದಂತೆಯೇ ಪೇಚಿಗೆ ಸಿಲುಕಿದ ಗೂಗಲ್ ಪಿಕ್ಸೆಲ್, ಮತ್ತೊಂದು ಟ್ವೀಟ್ ಮಾಡಿ ಸಮಜಾಯಿಷಿ ಕೊಟ್ಟಿದೆ. ಆದರೆ ಹಳೆಯ ಟ್ವೀಟ್ ಮಾತ್ರ ವೈರಲ್ ಆಗುತ್ತಲೇ ಇದೆ!