ಕಾಡುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಆರಂಭಿಸಿದೆ. ಈ ಕುರಿತಂತೆ ಹಲವರಿಗೆ ಈಗಲೂ ಗೊಂದಲಗಳಿದ್ದು, ಟೋಕನೈಸೇಷನ್ ಕುರಿತ ಮಾಹಿತಿ ಇಲ್ಲಿದೆ.
ಅಕ್ಟೋಬರ್ 1ರಿಂದ ಕಾರ್ಡ್ ನೆಟ್ವರ್ಕ್ ಮತ್ತು ಕಾರ್ಡ್ ವಿತರಕರನ್ನು ಹೊರತುಪಡಿಸಿ ಇತರ ಘಟಕಗಳು ಕಾರ್ಡ್ ಸಂಖ್ಯೆ, ಎಕ್ಸ್ಪೈರಿ ದಿನಾಂಕ ಇತ್ಯಾದಿ ಕಾರ್ಡ್ ಡೇಟಾವನ್ನು ಸಂಗ್ರಹಿಸುವಂತಿಲ್ಲ.
ಅಲ್ಲದೆ ಕಾರ್ಡುದಾರರಿಗೆ ಅನಾನುಕೂಲವಾಗದಂತೆ ಖಚಿತಪಡಿಸಿಕೊಳ್ಳಲು ಸಿ ಓಎಫ್ ಟೋಕನೈಸೇಷನ್ ವಿಧಾನವನ್ನು ಪರಿಚಯಿಸಲಾಗಿದೆ. ಇದರಿಂದಾಗಿ ಕಾರ್ಡುದಾರರು ಪ್ರತಿ ವಹಿವಾಟಿಗೆ ಕಾರ್ಡ್ ವಿವರಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ.
ಟೋಕನೈಸೇಷನ್ ಅನ್ನು ಯಾವುದೇ ಅನುಕೂಲಕರವಾದ ಸಮಯದಲ್ಲಿ ಮಾಡಬಹುದಾಗಿದೆ.
ಟೋಕನೈಸೇಷನ್ ಎನ್ನುವುದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ‘ಟೋಕನ್’ ಎಂಬ ವಿಶಿಷ್ಟ ಪರ್ಯಾಯ ಕೋಡ್ ನೊಂದಿಗೆ ಬದಲಾಯಿಸುವ ಪ್ರಕ್ರಿಯೆಯಾಗಿದೆ.
ಟೋಕನೈಸೇಷನ್ ಪ್ರಕ್ರಿಯೆ ಆನ್ಲೈನ್ ಇ ಕಾಮರ್ಸ್ ವಹಿವಾಟುಗಳಿಗೆ ಮಾತ್ರ ಅನ್ವಯವಾಗುತ್ತದೆಯೇ ಹೊರತು ಮುಖಾಮುಖಿ ಅಥವಾ ಪಾಯಿಂಟ್ ಆಫ್ ಸೇಲ್ ವಹಿವಾಟುಗಳಿಗೆ ಅಲ್ಲ.
ಟೋಕನೈಸೇಷನ್ ಅನ್ನು ಪ್ರತಿ ಕಾರ್ಡಿಗೆ ಪ್ರತಿ ಆನ್ಲೈನ್ / ಇ ಕಾಮರ್ಸ್ ವ್ಯಾಪಾರಿಯಲ್ಲಿ ಒಮ್ಮೆ ಮಾತ್ರ ಮಾಡಿದರೆ ಸಾಕು. ಪ್ರತಿಯೊಂದು ಟೋಕನ್ ನಿರ್ದಿಷ್ಟ ಕಾರ್ಡ್ ಮತ್ತು ನಿರ್ದಿಷ್ಟ ಆನ್ಲೈನ್ / ಇ ಕಾಮರ್ಸ್ ವ್ಯಾಪಾರಿಗೆ ವಿಶಿಷ್ಟವಾಗಿರುತ್ತದೆ. ಕಾರ್ಡ್ ದಾರರು ಒಂದೇ ಕಾರ್ಡ್ ಅನ್ನು ಅನೇಕ ಆನ್ಲೈನ್ / ಇ ಕಾಮರ್ಸ್ ವ್ಯಾಪಾರಿಗಳಲ್ಲಿ ಟೋಕನೈಸ್ ಮಾಡಬಹುದು.
ಒಂದು ಟೋಕನ್ ಯಾವ ವ್ಯಾಪಾರಿಗಾಗಿ ರಚಿತವಾಗಿದೆಯೇ ಅದನ್ನು ಹೊರತುಪಡಿಸಿ ಬೇರೆ ವ್ಯಾಪಾರಿಗೆ ಪಾವತಿಸಲು ಬಳಸಲಾಗುವುದಿಲ್ಲ.
ಒಮ್ಮೆ ಟೋಕನ್ ರಚಿಸಿದ ನಂತರ ಕಾಡುದಾರರು ಭವಿಷ್ಯದಲ್ಲಿ ವಹಿವಾಟುಗಳನ್ನು ಕೈಗೊಳ್ಳಲು ಟೋಕನ್ ವಿವರಗಳನ್ನು ನಮೂದಿಸುವ ಅಥವಾ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಟೋಕನೈಸ್ ಮಾಡಿದ ಕಾರ್ಡ್ ಅನ್ನು ಗುರುತಿಸಲು ಚೆಕ್ ಔಟ್ ಪ್ರಕ್ರಿಯೆಯಲ್ಲಿ ಆ ಕಾರ್ಡ್ ನ ಕೊನೆಯ ನಾಲ್ಕು ಅಂಕೆಗಳನ್ನು ತೋರಿಸಲಾಗುವುದು.
ಕಾರ್ಡ್ ದಾರರು ಸ್ವ ಇಚ್ಛೆಯಿಂದ ತಮ್ಮ ಟೋಕನ್ ನೋಂದಣಿಯನ್ನು ರದ್ದು ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ.
ಕಾರ್ಡ್ ಅನ್ನು ಟೋಕನೈಸ್ ಮಾಡುವುದು ಹೇಗೆ ?
ಟೋಕನೈಸೇಷನ್ ಆಯ್ಕೆ ಮಾಡಲು ಕಾರ್ಡುದಾರರು ವ್ಯಾಪಾರಿ ವೆಬ್ಸೈಟ್ / ಅಪ್ಲಿಕೇಶನ್ ನಲ್ಲಿ ಒಮ್ಮೆಯಷ್ಟೇ ನೋಂದಾಯಿಸಬೇಕಾಗುತ್ತದೆ.
ನೋಂದಾಯಿಸಲು ಕಾರ್ಡುದಾರರು ಕಾರ್ಡ್ ವಿವರಗಳನ್ನು ನಮೂದಿಸಬೇಕು ಮತ್ತು ಸಮ್ಮತಿ ಸೂಚಿಸಬೇಕು. ಕಾರ್ಡ್ ವಿತರಕರು ಓಟಿಪಿ ಅಂತಹ ಹೆಚ್ಚುವರಿ ದೃಢೀಕರಣ ಮೂಲಕ ಆ ಸಮ್ಮತಿಗೆ ಮಾನ್ಯತೆ ನೀಡುತ್ತಾರೆ.