ಈಗ ಅನ್ಯಗ್ರಹ ಜೀವಿಗಳ ಬಗ್ಗೆ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ಕಾಣುತ್ತಿರುವುದು ಕೂಡ ನೋಡಿದಾಕ್ಷಣ ಅನ್ಯಗ್ರಹದ ಜೀವಿಯೇ ಎಂದು ಎನಿಸಲಿಕ್ಕೆ ಸಾಕು. ಆದರೆ ಅಸಲಿಗೆ ಇದು ಬೇರೆ ಗ್ರಹಗಳ ಜೀವಿಯಲ್ಲ, ಬದಲಿಗೆ ನಮ್ಮದೇ ಭೂಮಿಯ ಮೇಲೆ ಇರುವ ಅಕ್ಟೋಪಸ್.
ಇದರ ವೈಜ್ಞಾನಿಕ ಹೆಸರು ವಿಟ್ರೆಲೆಡೋನೆಲ್ಲಾ ರಿಕಾರ್ಡಿ, ಇದನ್ನು ಕನ್ನಡದಲ್ಲಿ ಹೇಳುವುದಾದರೆ ಗಾಜಿನ ಅಕ್ಟೋಪಸ್ ಎನ್ನಬಹುದು. ಇದಕ್ಕೆ ಕಾರಣ, ಇದು ಪಾರದರ್ಶಕವಾಗಿದ್ದು, ಗಾಜಿನಂತೆಯೇ ಕಾಣಿಸುತ್ತದೆ. ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ನೀರಿನಲ್ಲಿ ಕಂಡುಬರುವ ಅತ್ಯಂತ ಅಪರೂಪವಾದ ಜೀವಿ ಇದು. ಈ ಸುಂದರವಾದ ಜೀವಿಗಳು ಸಮುದ್ರದಾಳದಲ್ಲಿ ಇದ್ದು, ಸೂರ್ಯನ ಬೆಳಕು ಇವುಗಳಿಗೆ ತಲುಪುವುದಿಲ್ಲ.
ಇದರ ವಿಡಿಯೋ ಇದೀಗ ವೈರಲ್ ಆಗಿದೆ. ಸಾಮಾನ್ಯ ಜನರು ಕಾಣುವುದು ಕಷ್ಟ ಎಂದುಕೊಂಡ ಈ ಜೀವಿಯನ್ನು ಎಲ್ಲರೂ ನೋಡುವ ಸಲುವಾಗಿ ‘ದಿ ಆಕ್ಸಿಜನ್ ಪ್ರಾಜೆಕ್ಟ್’ ಈ ಅಪರೂಪದ ಜೀವಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಈ ವಿಡಿಯೋದಲ್ಲಿ ಅಕ್ಟೋಪಸ್ನ ಕಣ್ಣುಗಳು, ಆಪ್ಟಿಕ್ ನರ ಮತ್ತು ಜೀರ್ಣಾಂಗಗಳು ಮಾತ್ರ ಅಪಾರದರ್ಶಕವಾಗಿವೆ. ಉಳಿದವುಗಳು ಪಾರದರ್ಶಕವಾಗಿದ್ದು, ಸುಂದರ ಚಿತ್ರದಂತೆ ಭಾವಿಸುತ್ತದೆ.
ವೀಡಿಯೊ ಇದಾಗಲೇ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 440 ಲೈಕ್‌ಗಳನ್ನು ಪಡೆದುಕೊಂಡಿದೆ. ಅಪರೂಪದ ಮತ್ತು ನಿಗೂಢ ಪ್ರಾಣಿಯ ಸೌಂದರ್ಯಕ್ಕೆ ನೆಟ್ಟಿಗರು ಮಂತ್ರಮುಗ್ಧರಾಗಿದ್ದಾರೆ.
https://twitter.com/TheOxygenProj/status/1579150219354116097?ref_src=twsrc%5Etfw%7Ctwcamp%5Etweetembed%7Ctwterm%5E1579150219354116097