ಬೆಂಗಳೂರು: ವಿಧಾನಸಭೆ ಉಪಸಭಾಪತಿ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ(56) ನಗರದ ಮಣಿಪಾಲ ಆಸ್ಪತ್ರೆಯಲ್ಲಿ ತಡರಾತ್ರಿ 12 15ಕ್ಕೆ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 15 ರ ನಂತರ ಅವರ ಆರೋಗ್ಯ ವಿಷಮಿಸಿತ್ತು. ಸವದತ್ತಿ ಎಲ್ಲಮ್ಮ ಕ್ಷೇತ್ರದ ಶಾಸಕರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ
1,966ರ ಜನವರಿ 18ರಂದು ಆನಂದ ಮಾಮನೆ ಜನಿಸಿದ್ದರು. ಚಂದ್ರಶೇಖರ ಮಾಮನಿ ಮತ್ತು ಗಂಗಮ್ಮ ಮಾಮನಿ ದಂಪತಿಯ ಪುತ್ರರಾದ ಆನಂದ ಮಾಮನಿ ಪತ್ನಿ ರತ್ನಾ, ಪುತ್ರಿ ಚೇತನಾ ಮತ್ತು ಪುತ್ರ ಚಿನ್ಮಯ ಅವರನ್ನು ಅಗಲಿದ್ದಾರೆ.
2000 ರಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿದ್ದರು. 2005 ಮತ್ತು 2008ರಲ್ಲಿ ಸವದತ್ತಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2004 ರಿಂದ ಜೆಡಿಎಸ್ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು 2008ರಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು.
ಸವದತ್ತಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. 2013 ಮತ್ತು 2018ರಲ್ಲಿಯೂ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ ಆನಂದ ಮಾಮನಿ ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದರು.
ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಅವರು ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದರು. ಜನಾನುರಾಗಿ ನಾಯಕರಾಗಿದ್ದ ಆನಂದ ಮಾಮನಿ ವಿಧಿವಶರಾಗಿದ್ದಾರೆ. ಅವರ ತಂದೆ ಚಂದ್ರಶೇಖರ ಮಾಮನಿ ಅವರೂ ಮೂರು ಬಾರಿ ಶಾಸಕರಾಗಿದ್ದರು. ಚಂದ್ರಶೇಖರ ಮಾಮನಿ 1995 -99ರ ಅವಧಿಯಲ್ಲಿ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಉಪಸಭಾಧ್ಯಕ್ಷರಾಗಿದ್ದಾಗಲೇ ಚಂದ್ರಶೇಖರ ಮಾಮನಿ ನಿಧನರಾಗಿದ್ದರು ಕಾಕತಾಳೀಯ ಎನ್ನುವಂತೆ ಆನಂದ ಮಹಾಮನಿ ಕೂಡ ತಂದೆಯಂತೆ ಉಪ ಸಭಾಧ್ಯಕ್ಷರಾಗಿದ್ದಾಗಲೇ ನಿಧನರಾಗಿದ್ದಾರೆ.