ಕರಡಿಗಳನ್ನು ಅನೇಕ ವನ್ಯಜೀವಿ ಜೀವಶಾಸ್ತ್ರಜ್ಞರು ಉತ್ತರ ಅಮೆರಿಕದ ಅತ್ಯಂತ ಬುದ್ಧಿವಂತ ಭೂ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಯಾವುದೇ ಭೂ ಸಸ್ತನಿಗಳ ಗಾತ್ರಕ್ಕೆ ಹೋಲಿಸಿದರೆ ಕರಡಿಗಳು ಅತಿದೊಡ್ಡ ಮತ್ತು ಹೆಚ್ಚು ಸುರುಳಿಯಾಕಾರದ ಮೆದುಳುಗಳನ್ನು ಹೊಂದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಆದರೆ ಇವು ದಾಳಿ ಇಟ್ಟರೆ ಮಾತ್ರ ಮನುಷ್ಯನ ಕಥೆ ಮುಗಿಯಿತು.
ಇಲ್ಲೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಮನುಷ್ಯನ ಮೇಲೆ ಕರಡಿ ಅಟ್ಯಾಕ್ ಮಾಡಲು ಹೊರಟಿರುವ ಭಯಾನಕ ದೃಶ್ಯ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಕಾರಿನಲ್ಲಿ ಹೋಗುವ ಸಮಯದಲ್ಲಿ ಈ ಭಯಾನಕ ದೃಶ್ಯ ಕಂಡಿದ್ದಾರೆ. ವ್ಯಕ್ತಿಯೊಬ್ಬ ಅಸಹಾಯಕತೆಯಿಂದ ಮರವನ್ನು ಏರಿದ್ದಾನೆ. ಅವರ ಮೇಲೆ ದಾಳಿ ಮಾಡಲು ಯತ್ನಿಸಿದ ಕರಡಿ ಕೂಡ ಮರವನ್ನು ಏರುತ್ತಿದೆ. ಈ ದೃಶ್ಯವನ್ನು ಕಾರಿನಲ್ಲಿ ಹೋಗುವ ವ್ಯಕ್ತಿ ಕಂಡು ವಿಡಿಯೋ ಮಾಡಿಕೊಂಡಿದ್ದಾರೆ.
ಈ ಘಟನೆಯಲ್ಲಿ ಮುಂದೇನಾಯಿತು ಎನ್ನುವುದು ಸ್ಪಷ್ಟವಾಗಿಲ್ಲ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವ್ಯಕ್ತಿ, ತಾವು ಕಂಡ ದೃಶ್ಯವನ್ನು ವಿವರಿಸಿದ್ದಾರೆ. ‘ಆ ಸಮಯದಲ್ಲಿ ನಾನು ಅಸಹಾಯಕನಾಗಿದ್ದೆ. ಕಾರಿನ ಹಾರ್ನ್ ಮಾಡಿದರೆ ಅಥವಾ ಮರವೇರಿದ್ದ ವ್ಯಕ್ತಿಯನ್ನು ರಕ್ಷಿಸಲು ಕಾರಿನಿಂದ ಇಳಿದಿದ್ದರೆ ಕರಡಿ ನನ್ನ ಮೇಲೆ ಎರಗಿ ಸಾಯಿಸುವ ಸಾಧ್ಯತೆ ಇತ್ತು. ಆದ್ದರಿಂದ ನನ್ನ ಪ್ರಾಣವನ್ನು ಕಾಪಾಡಿಕೊಳ್ಳುವುದು ನನಗೆ ಮುಖ್ಯವಾಗಿತ್ತು. ಅಲ್ಲಿಂದ ಹೋಗಿಬಿಟ್ಟೆ’ ಎಂದು ಬರೆದುಕೊಂಡಿದ್ದಾರೆ.
ಆದರೆ ಈ ವಿಡಿಯೋ ನೋಡಿದವರು ಮಾತ್ರ ಮರವೇರಿದ ವ್ಯಕ್ತಿ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದೇ ಊಹಿಸಿದ್ದಾರೆ.