ಸಿಂಹಗಳು ಎಷ್ಟೇ ಬಲಿಷ್ಠವಾಗಿದ್ದು, ಎಂಥದ್ದೇ ಪ್ರಾಣಿಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲುದು. ಆದರೆ ಜಿರಾಫೆಯ ವಿಷಯಕ್ಕೆ ಬಂದಾಗ ಮಾತ್ರ ಸಿಂಹಗಳು ಭಯ ಬೀಳುತ್ತವೆ. ಏಕೆಂದರೆ ಅವುಗಳನ್ನು ಕೊಲ್ಲುವುದು ಸಿಂಹಗಳಿಗೆ ಬಲು ಕಷ್ಟ. ಇದೇ ಕಾರಣಕ್ಕೆ ಸಶಕ್ತ ಜಿರಾಫೆಯ ಬದಲು ಅಸಹಾಯಕ, ಅನಾರೋಗ್ಯ ಮತ್ತು ಗರ್ಭಿಣಿ ಜಿರಾಫೆಗಳನ್ನಷ್ಟೇ ಕೊಲ್ಲುತ್ತವೆ.
ಸಾಮಾನ್ಯವಾಗಿ ಸಿಂಹಗಳು ಪ್ರಾಣಿಗಳ ಗಂಟಲಿಗೆ ಬಾಯಿ ಹಾಕಿ ಉಸಿರು ನಿಲ್ಲಿಸಿ ಕೊಲ್ಲುತ್ತವೆ. ಆದರೆ
ಜಿರಾಫೆಯು ಎಷ್ಟು ಎತ್ತರವಾಗಿದೆ ಎಂದರೆ ಅದರ ಗಂಟಲನ್ನು ಕಚ್ಚಲು ಸಿಂಹಗಳಿಗೆ ಎಂದಿಗೂ ಸಾಧ್ಯವಿಲ್ಲ. ಅದಕ್ಕಾಗಿಯೇ ಜಿರಾಫೆ ಎನ್ನುವುದು ಸಿಂಹಗಳಿಗೆ ಕಠಿಣ ಬೇಟೆ.
ಆದರೆ ಜಿರಾಫೆಯೊಂದನ್ನು ಬೇಟೆಯಾಗಿರುವ ಒಂದು ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್ ಆಗಿದೆ. ಜಿರಾಫೆಯೊಂದು ಹೋಗುತ್ತಿದ್ದಾಗ ಒಂದಲ್ಲ, ಎರಡಲ್ಲ 20-25 ಸಿಂಹಗಳು ಒಟ್ಟಿಗೇ ಅಟ್ಯಾಕ್ ಮಾಡಿರುವ ವಿಡಿಯೋ ಇದಾಗಿದೆ. ತನ್ನ ಕಠಿಣ ಬೇಟೆಯನ್ನು ಸುಲಭ ಮಾಡಿಕೊಳ್ಳಲು 25ಕ್ಕೂ ಅಧಿಕ ಸಿಂಹಗಳು ಒಟ್ಟಿಗೇ ಹೋಗಿ ಬಲೆ ಬೀಳಿಸಿರುವ ವಿಡಿಯೋ ನೋಡುಗರನ್ನು ತಲ್ಲಣಗೊಳಿಸುತ್ತಿದೆ.
ಹತ್ತಾರು ಸಿಂಹಗಳು ಮಲಗಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದರ ಅರಿವೇ ಇಲ್ಲದ ಜಿರಾಫೆ ಅತ್ತ ಹೋಗುತ್ತಿದೆ. ಅದನ್ನು ಒಂದೆರಡು ಸಿಂಹಗಳು ಗಮನಿಸಿ ಬೇಟೆಯಾಡಲು ಹೋಗುತ್ತದೆ. ಉಳಿದ ಸಿಂಹಗಳಿಗೂ ಎಚ್ಚರವಾಗಿ ಅವು ಕೂಡ ಒಟ್ಟಿಗೇ ಬೇಟೆಯಾಡಲು ಹೋಗುತ್ತವೆ. ಜಿರಾಫೆ ಎದ್ದು ಬಿದ್ದು ಅಲ್ಲಿಂದ ಓಡುತ್ತದೆ, ಆದರೆ ಸಿಂಹಗಳು ಬಿಡದೇ ಅದರ ಬೆನ್ನಟ್ಟುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮುಂದೇನಾಗಿದೆ ಎಂದು ವಿಡಿಯೋದಲ್ಲಿ ಕಾಣಿಸುವುದಿಲ್ಲವಾದರೂ ಜಿರಾಫೆ ಸಿಂಹಗಳಿಗೆ ಆಹಾರವಾಗಿದೆ ಎಂದು ಊಹಿಸುವುದು ಕಷ್ಟವಲ್ಲ.