ಇತ್ತೀಚಿನ ದಿನಗಳಲ್ಲಿ ‘ಮೂನ್ ಲೈಟಿಂಗ್’ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಒಂದು ಕಂಪನಿಯಲ್ಲಿದ್ದುಕೊಂಡೇ ಮತ್ತೊಂದು ಕಂಪನಿಗೆ ಉದ್ಯೋಗ ಮಾಡುವುದಕ್ಕೆ ಮೂನ್ ಲೈಟಿಂಗ್ ಆಗಿದ್ದು, ಕೊರೊನಾ ಕಾರಣಕ್ಕೆ ವರ್ಕ್ ಫ್ರಂ ಹೋಂ ನಲ್ಲಿರುವ ಬಹಳಷ್ಟು ಐಟಿ ಉದ್ಯೋಗಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಇದು ಬೆಳಕಿಗೆ ಬಂದ ಬಳಿಕ ವಿಪ್ರೋ ಕಠಿಣ ಕ್ರಮ ಕೈಗೊಂಡಿದ್ದು, ತನ್ನ ಕಂಪನಿಯ 300 ಉದ್ಯೋಗಿಗಳನ್ನು ವಜಾ ಮಾಡಿತ್ತು. ಇನ್ಫೋಸಿಸ್ ಸೇರಿದಂತೆ ಇನ್ನೂ ಕೆಲ ಕಂಪನಿಗಳು ಮೂನ್ ಲೈಟಿಂಗ್ ಉದ್ಯೋಗಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿದ್ದರ ಮಧ್ಯೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮೂನ್ ಲೈಟಿಂಗ್ ಗೆ ಅವಕಾಶ ನೀಡಿ ಅಚ್ಚರಿ ಮೂಡಿಸಿದೆ.
ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮೂನ್ ಲೈಟಿಂಗ್ ಅವಕಾಶ ನೀಡಿದ್ದರು ಸಹ ಕೆಲವೊಂದು ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ಉದ್ಯೋಗಿಗಳು GIG ಕೆಲಸ ಮಾಡಬಹುದು ಎಂದು ತಿಳಿಸಲಾಗಿದ್ದು, ಆದರೆ ಅದಕ್ಕೂ ಮುನ್ನ ಮ್ಯಾನೇಜರ್ ಮತ್ತು ಮಾನವ ಸಂಪನ್ಮೂಲ ಕಾರ್ಯ ನಿರ್ವಾಹಕರ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಉದ್ಯೋಗಿಗಳು ಕ್ಯಾಬ್ ಓಡಿಸುವುದು, ಡೆಲಿವರಿ ಬಾಯ್ಸ್, ಫ್ರೀಲ್ಯಾನ್ಸ್ ಕೆಲಸಗಳನ್ನು ಮಾಡಬಹುದಾಗಿದ್ದು, ಆದರೆ ಕೆಲಸ ಮಾಡುವ ಕಂಪನಿ ಇನ್ಫೋಸಿಸ್ ಅಥವಾ ಇನ್ಫೋಸಿಸ್ ಕ್ಲೈಂಟ್ ಗಳ ಜೊತೆ ಸ್ಪರ್ಧೆಯಲ್ಲಿ ಇರಬಾರದು ಎಂದು ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ಮೂನ್ ಲೈಟಿಂಗ್’ ಗೆ ಅಂತ್ಯ ಆಡಲು ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್ ತೊರೆದು ಕಚೇರಿಗೆ ಬರಬೇಕೆಂದು ತಿಳಿಸಲು ಕಂಪನಿ ಮುಂದಾಗಿತ್ತಾದರೂ ಹಲವು ಉದ್ಯೋಗಿಗಳು ರಾಜೀನಾಮೆ ನೀಡುತ್ತಿರುವ ಕಾರಣ ಇನ್ಫೋಸಿಸ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.