ಆಧುನಿಕತೆ ಬಂದಂತೆಲ್ಲಾ ಹಬ್ಬಗಳ ಆಚರಣೆಯ ಶೈಲಿಯೂ ಬದಲಾಗಿದೆ. ಈ ಹಿಂದೆ ಹಬ್ಬಗಳ ಸಂದರ್ಭದಲ್ಲಿ ಜಾನಪದ ಸಂಸ್ಕೃತಿಯನ್ನು ಪಾಲಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಂಪ್ರದಾಯಗಳು ಬದಲಾಗಿ ಹೋಗಿವೆ. ಈ ಪೈಕಿ ದೀಪಾವಳಿ ಸಂದರ್ಭದಲ್ಲಿ ಆಚರಿಸುವ ‘ಅಂಟಿಕೆ ಪಿಂಟಿಕೆ’ ಯೂ ಒಂದು.
ಹೆಣ್ಣು ಮಕ್ಕಳು ತಟ್ಟೆಯಲ್ಲಿ ದೀಪ ಇಟ್ಟುಕೊಂಡು ಮನೆ ಮನೆಗೆ ತೆರಳಿ ‘ಅಂಟಿಕೆ ಪಿಂಟಿಕೆ’ ಹೇಳಿ ದೀಪಕ್ಕೆ ಎಣ್ಣೆ ಹಾಕಿಸಿಕೊಂಡು, ಜೊತೆಗೆ ಕೆಲವರು ಹಣವನ್ನೂ ಹಾಕುತ್ತಿದ್ದರು. ಇದೀಗ ಇದನ್ನು ಮತ್ತೆ ಆರಂಭಿಸಲು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತು ಮುಂದಾಗಿದೆ.
ಹೀಗಾಗಿ ಅಕ್ಟೋಬರ್ 23ರಂದು ಸಂಜೆ 6 ಗಂಟೆಗೆ ಅಂಟಿಕೆ ಪಿಂಟಿಕೆ ಆಯೋಜನೆ ಮಾಡಲಾಗಿದ್ದು, ಇದನ್ನು ಕೋಣಂದೂರು ಮಂದಳಿ ಗ್ರಾಮದ ಸುರೇಶ ಮತ್ತು ತಂಡದವರು ನಡೆಸಿಕೊಡಲಿದ್ದಾರೆ. ಅಂಟಿಕೆ ಪಿಂಟಿಕೆ ಬಂದ ಸಂದರ್ಭದಲ್ಲಿ ಮನೆ ಮಾಲೀಕರು ಜ್ಯೋತಿಗೆ ಎಣ್ಣೆ ಸುರಿದು ದವಸ ಧಾನ್ಯ ನೀಡುವಂತೆ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದ್ದಾರೆ.