ಧಾರವಾಡ: ತಪ್ಪಾಗಿ ಪಿಂಚಣಿ ನಿಗದಿಪಡಿಸಿದ ಪಿಎಫ್ ಇಲಾಖೆಗೆ ಬಡ್ಡಿ ಸಮೇತ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಪ್ರಾವಿಡೆಂಟ್ ಫಂಡ್ ಇಲಾಖೆ ಹುಬ್ಬಳ್ಳಿಯವರು ತನ್ನ ನಿವೃತ್ತಿ ನಂತರದ ಪಿಂಚಣಿ ನಿಗದಿಪಡಿಸುವಾಗ ತಪ್ಪು ಲೆಕ್ಕ ಹಾಕಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹುಬ್ಬಳ್ಳಿಯ ಉಣಕಲ್ನ ಸಾಯಿನಗರ ನಿವಾಸಿ ಎಸ್. ಸಿದ್ದಪ್ಪ ಎಂಬುವವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕಷವಾಗಿ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿ.ಎ.ಬೋಳಶೆಟ್ಟಿ, ಪಿ.ಸಿ.ಹಿರೇಮಠ ಅವರು ವಿಚಾರಣೆ ನಡೆಸಿದ್ದು, ದೂರಿಗೆ ಸಂಬಂಧಿಸಿದ ಪಿಂಚಣಿ ವ್ಯಾಜ್ಯವನ್ನು ಪಿಎಫ್ ಇಲಾಖೆಯಿಂದ ಪ್ರತಿ ತಿಂಗಳು ನಡೆಸುವ ಪಿಂಚಣಿ ಲೋಕ್ ಅದಾಲತ್ನಲ್ಲಿ ದೂರುದಾರ ಭಾಗವಹಿಸಿ ಪರಿಹಾರ ಕಂಡುಕೊಳ್ಳದೇ ಅನಗತ್ಯವಾಗಿ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದು ತಪ್ಪು ಅಂತಾ ಹೇಳಿ ಈ ದೂರನ್ನು ವಜಾಗೊಳಿಸಬೇಕು ಎಂದು ಪಿಎಫ್ ಇಲಾಖೆಯವರು ವಾದಿಸಿದ್ದರು.
ಅವರ ವಾದವನ್ನು ತಳ್ಳಿಹಾಕಿದ ಆಯೋಗ, ದೂರುದಾರನ ಪಿಂಚಣಿ ನಿಗದಿಪಡಿಸುವಲ್ಲಿ ಪಿಎಫ್ ಇಲಾಖೆ ತಪ್ಪೆಸಗಿ ಸೇವಾ ನ್ಯೂನ್ಯತೆ ಎಸಗಿದೆ ಅಂತಾ ಅಭಿಪ್ರಾಯಪಟ್ಟು ದೂರುದಾರನಿಗೆ ಅವನ ಪಿಂಚಣಿ ನಿಗದಿಪಡಿಸಿದ ದಿನಾಂಕದಿಂದ ಆಯೋಗ ಆದೇಶ ಹೊರಡಿಸಿದ ದಿನಾಂಕದವರೆಗೆ ಒಟ್ಟು 64,938 ರೂ. ನೀಡುವಂತೆ ಆದೇಶಿಸಿದೆ. ಜೊತೆಗೆ ಮಾನಸಿಕ ತೊಂದರೆಗಾಗಿ 20 ಸಾವಿರ ರೂ. ಪರಿಹಾರ ಹಾಗೂ 10 ಸಾವಿರ ರೂ. ಪ್ರಕರಣದ ಖರ್ಚು ವೆಚ್ಚ ಅಂತ ಒಂದು ತಿಂಗಳ ಒಳಗಾಗಿ ನೀಡುವಂತೆ ತಪ್ಪಿದ್ದಲ್ಲಿ ಶೇ.10 ರಂತೆ ಬಡ್ಡಿ ಸಮೇತ ನೀಡಲು ಆಯೋಗ ಆದೇಶಿಸಿದೆ.