ಮೈಸೂರು: ಮೈಸೂರು ಭಾಗದ ನಾಯಕತ್ವವನ್ನು ಜಿ.ಟಿ.ದೇವೇಗೌಡ ಅವರಿಗೆ ವಹಿಸಲಾಗಿದೆ. ಅವರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ವ್ಯಕ್ತವಾದರೂ ನಾನು ಸಹಿಸಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ಶಾಸಕ ಜಿ.ಟಿ.ದೇವೇಗೌಡ ಹಾಗೂ ಅವರ ಕುಟುಂಬದ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ದೇವೇಗೌಡರು. ಮೈಸೂರು ಜಿಲ್ಲಾ ಜೆಡಿಎಸ್ ಉಸ್ತುವಾರಿಯನ್ನು ಜಿ.ಟಿ.ಡಿ ಅವರಿಗೆ ವಹಿಸಲಾಗಿದೆ. ಅವರ ನಿರ್ಧಾರವೇ ಅಂತಿಮ. ಅವರ ನಾಯಕತ್ವದ ವಿರುದ್ಧ ಮಾತನಾಡಬಾರದು. ಇಷ್ಟವಿಲ್ಲದವರು ಪಕ್ಷದಿಂದ ಹೊರಹೋಗಬಹುದು ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ಜಿ.ಟಿ.ಡಿ, ಮೂರು ವರ್ಷದ ಬಳಿಕ ಮನಸ್ಸಿಗೆ ನೆಮ್ಮದಿಯಾಗಿದೆ. ಮನೆಯವರೆಲ್ಲರೂ ಸಂತೋಷದಿಂದ ಇದ್ದಾರೆ. ಮೂರು ವರ್ಷಗಳಿಂದ ನಾನು ಸ್ವಲ್ಪ ಪಕ್ಷದಿಂದ ದೂರವಿದ್ದೆ. ಆದರೂ ನಿನ್ನೆ ದೇವೇಗೌಡರು ನಮ್ಮ ಮನೆಗೆ ಬಂದಿದ್ದರು. ಇನ್ನು ಮುಂದೆ ಪಕ್ಷದ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದು ಹೇಳಿದರು.