ಕಿಂದರ ಜೋಗಿ ಕಥೆ ನಿಮಗೆಲ್ಲ ಗೊತ್ತೇ ಇರುತ್ತೆ. ಆತನ ಬಳಿ ಇರುವ ವಿಶೇಷ ಕೊಳಲನ್ನ ನುಡಿಸಿ, ಊರಲ್ಲಿರೋ ಇಲಿಗಳನ್ನೆಲ್ಲ ಸಂಮೋಹನ ಮಾಡಿ, ಊರನ್ನ ಇಲಿಗಳಿಂದ ಮುಕ್ತ ಮಾಡುತ್ತಾನೆ. ಅಂತಹ ಒಂದು ಮಾಂತ್ರಿಕ ಶಕ್ತಿ ಆ ಕೊಳಲಿನಲ್ಲಿ ಇರುತ್ತೆ. ಇದೆಲ್ಲ ಕಥೆಗಳಲ್ಲಿ ಮಾತ್ರ ನಡೆಯೊದಕ್ಕೆ ಸಾಧ್ಯ ಅಂತ ಅಂದುಕೊಂಡ್ರೆ ನೀವು ಅಂದುಕೊಂಡಿರೋದು ತಪ್ಪಾಗುತ್ತೆ. ಯಾಕಂದ್ರೆ ಈ ವಿಡಿಯೋ ನೀವು ಅಂದುಕೊಳ್ಳೋತ್ತಿರೋದು ತಪ್ಪು ಅಂತ ಸಾಬೀತುಮಾಡುತ್ತೆ.
ಇಲ್ಲಿ ನೋಡಿ, ವ್ಯಕ್ತಿಯೊಬ್ಬ ಸ್ಯಾಕ್ಸೋಫೋನ್ ಹಿಡಿದುಕೊಂಡು, ವಿಶಾಲವಾದ ಹುಲ್ಲುಗಾವಲಿನ ಪ್ರದೇಶದಲ್ಲಿ ನಿಂತಿದ್ದಾನೆ. ಆತ ಅಲ್ಲಿಗೆ ಬಂದಾಕ್ಷಣ ಮೊದಲು ಆ ಜಾಗದಲ್ಲಿ ದೂರದಲ್ಲಿ ಇರುವ ಕೆಲ ಹಸುಗಳನ್ನ ಗಮನಿಸುತ್ತಾನೆ, ಆ ನಂತರ ಒಂದು ಜಾಗದಲ್ಲಿ ನಿಂತು ಸ್ಯಾಕ್ಸೋಫೋನ್ ನುಡಿಸುತ್ತಾನೆ. ನೀವು ನಂಬ್ತಿರೋ ಇಲ್ವೋ… ಆ ಸ್ಯಾಕ್ಸೋಫೋನ್ನಿಂದ ಸುಮಧುರ ಸಂಗೀತ ತರಂಗಗಳು ಹೊರ ಬರ್ತಿದ್ದ ಹಾಗೆಯೇ ಅಲ್ಲಿ ಚಮತ್ಕಾರವೇ ನಡೆದಿತ್ತು.
ದೂರದಲ್ಲಿ ಹುಲ್ಲು ಮೇಯುತ್ತಿದ್ದ ಹಸುಗಳೆಲ್ಲ ಆ ಸ್ಯಾಕ್ಸೋಫೋನ್ ನಾದಕ್ಕೆ ಅವುಗಳೆಲ್ಲ ಒಟ್ಟಾಗಿ ಆ ವ್ಯಕ್ತಿಯ ಬಳಿ ಬಂದು ತಲೆದೂಗುತ್ತಿರುತ್ತೆ. ಈ ಅದ್ಭುತವಾದ ವಿಡಿಯೋವನ್ನ ಈಗಾಗಲೇ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ತನ್ಸು ಯೆಗೆನ್ ಎಂಬ ಟ್ವಿಟರ್ ಖಾತೆದಾರರು ಈ ಸುಂದರವಾದ ವಿಡಿಯೋ ಹಂಚಿಕೊಂಡಿದ್ದಾರೆ. ಬಹುಶಃ ಇದು ನಿತ್ಯದ ಅಭ್ಯಾಸವಾಗಿರಬಹುದು. ಕೃಷ್ಣ ಹೇಗೆ ಕೊಳಲನ್ನೂದಿ ಹಸುಗಳನ್ನು ಕಾಯುತ್ತಿದ್ದನೋ ಹಾಗೆ ಈ ಆಧುನಿಕ ಕೃಷ್ಣ ಸ್ಯಾಕ್ಸೊಫೋನ್ ನುಡಿಸಿ ಹಸುಗಳನ್ನು ಕಾಯುತ್ತಿರಬಹುದು. ಒಮ್ಮೆ ಇವ ಸ್ಯಾಕ್ಸೊಫೋನ್ ನುಡಿಸುತ್ತಿದ್ದಂತೆ ಹೆಚ್ಚೂ ಕಡಿಮೆ 30 ಹಸುಗಳಾದರೂ ಇವನ ಬಳಿ ಒಟ್ಟುಗೂಡುತ್ತವೆ. ಇದು ನಾದದ ಶಕ್ತಿ!
ನೆಟ್ಟಿಗರು ಈ ಪೋಸ್ಟ್ಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ನಮ್ಮ ಕೃಷ್ಣ ಕೊಳಲನ್ನೂದುತ್ತಿದ್ದ, ಈತ ಸ್ಯಾಕ್ಸೊಫೋನ್ ನುಡಿಸುತ್ತಿದ್ದಾನೆ ಎಂದು ಒಬ್ಬರು ಕೃಷ್ಣನನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, ನಾನು ಚಿಕ್ಕವನಿದ್ದಾಗ ನನ್ನ ಅಜ್ಜನೊಂದಿಗೆ ಹೊಲಕ್ಕೆ ಹೋಗುತ್ತಿದ್ದೆ. ಅಜ್ಜ ಟ್ರಕ್ಕಿನ ಹಾರ್ನ್ ಬಾರಿಸಿ ಹಸುಗಳನ್ನು ಒಟ್ಟುಗೂಡಿಸುತ್ತಿದ್ದರು. ಆ ಹಾರ್ನ್ ಕೂಡ ಸ್ಯಾಕ್ಸೊಫೋನ್ನಂತೆ ಕೇಳಿಸುತ್ತಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.