ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಪಟಾಕಿ ನಿಷೇಧವನ್ನು ತೆಗೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಹಬ್ಬ ಆಚರಿಸಲು ಇನ್ನೂ ಹಲವು ಮಾರ್ಗಗಳಿವೆ. ನಿಮ್ಮ ಹಣವನ್ನು ಸಿಹಿ ತಿಂಡಿಗಳಿಗಾಗಿ ಖರ್ಚು ಮಾಡಿ ಎಂದು ಸಲಹೆ ನೀಡಿದೆ.
ಜನರು ಉಸಿರಾಡಲು ಬಿಡಿ ಎಂದು ಹೇಳಿದ ನ್ಯಾಯಾಧೀಶರು ಪಟಾಕಿ ನಿಷೇಧ ಹಿಂಪಡೆಯಲು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿರುವುದರಿಂದ, ಜನವರಿ 1, 2023ರ ವರೆಗೆ ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದಕ್ಕೆ ಈಗ ಒಪ್ಪಿಗೆ ನೀಡಿದಂತಾಗಿದೆ.
ದೆಹಲಿ ಮಾತ್ರವಲ್ಲ ಈಗಾಗಲೇ ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳು ಸಹ ಪಟಾಕಿ ಸಿಡಿಸಲು ನಿರ್ಬಂಧ ಹೇರಿದ್ದು, ಇದನ್ನು ಹಿಂಪಡೆಯುವಂತೆ ಕೋರಿ ಬಿಜೆಪಿ ಸಂಸದ ಮನೋಜ್ ತಿವಾರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ತುರ್ತು ವಿಚಾರಣೆಗೆ ನ್ಯಾಯಮೂರ್ತಿ ಎಂ.ಆರ್. ಶಾ ನೇತೃತ್ವದ ಪೀಠ ನಿರಾಕರಿಸಿದೆ.