ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಗಳಲ್ಲಿ 30 ಶಿಕ್ಷಕರನ್ನು ವಶಕ್ಕೆ ಪಡೆದಿದ್ದಾರೆ.
2014-15ರಲ್ಲಿ ನಡೆದಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಕರ ನೇಮಕಾತಿ ಅಕ್ರಮ ಹಗರಣದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಐವರು ಶಿಕ್ಷಕರನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರ ಜಿಲ್ಲೆಯಲ್ಲಿ 25 ಶಿಕ್ಷಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿರುವ ಅಧಿಕಾರಿಗಳು ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದ ಶಾಲಾ ಶಿಕ್ಷಕ ಕರಿಬಸಪ್ಪ ಐರಾಣಿ, ಬಾಂಡ್ರಾವಿ ಗ್ರಾಮದ ಶಿಕ್ಷಕಿ ಸವಿತಾ, ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಶಿಕ್ಷಕ ಕೊಟ್ರಪ್ಪ, ಹಿರೇಕಂದವಾಡಿ ಗ್ರಾಮದ ಶಿಕ್ಷಕ ದೀಪಕ್ ಪೂಜಾರಿ, ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಶಾಲಾ ಶಿಕ್ಷಕ ಪಿ.ಏಕಾಂತ ಮೊದಲಾದವರನ್ನು ವಶಕ್ಕೆ ಪಡೆಯಲಾಗಿದೆ.