ಶವ ಸಾಗಿಸಲು ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ನಿರಾಕರಿಸಿದ ಹಲವು ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ಈ ಘಟನೆ ನಡೆದಿದ್ದು ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಿನೇಶ್ ಎಂಬವರು ತಮ್ಮ ಪತ್ನಿಯನ್ನು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಅವರಿಗೆ 5,000 ರೂಪಾಯಿಗಳಿಗೆ ಬೇಡಿಕೆ ಇಡಲಾಗಿದೆ. ಆದರೆ ತಮ್ಮ ಬಳಿ ಕೇವಲ 3000 ರೂ. ಮಾತ್ರ ಇದೆ ಎಂದಾಗ ಅವರನ್ನು ಕಳುಹಿಸಿಕೊಡಲಾಗಿದೆ. ಅಲ್ಲದೆ 5,000 ರೂ. ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ.
ದಿನೇಶ್ ಪತ್ನಿಯೊಂದಿಗೆ ಮತ್ತೆ ಬಂದಾಗ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಲಾಗಿದ್ದು, ಮಗು ಸಾವನ್ನಪ್ಪಿರುವುದು ತಿಳಿದು ಬಂದಿದೆ. ಇಷ್ಟಾದರೂ ಖಾಸಗಿ ಕ್ಲಿನಿಕ್ಕಿಗೆ ಕಳುಹಿಸಿಕೊಡಲಾಗಿದ್ದು, ಬಳಿಕ ಮಗುವಿನ ಶವವನ್ನು ತೆಗೆದುಕೊಂಡು ಹೋಗಲು ಆಂಬುಲೆನ್ಸ್ ನೀಡಲು ನಿರಾಕರಿಸಲಾಗಿದೆ.
ಹೀಗಾಗಿ ದಂಪತಿ ಮಗುವಿನ ಶವವನ್ನು ಬೈಕಿನಲ್ಲಿ ಇರಿಸಿಕೊಂಡು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ, ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.