
ಇನ್ ಸ್ಟಾಗ್ರಾಮ್, ಫೇಸ್ ಬುಕ್ ರೀಲ್ಸ್ ಅಥವಾ ಯೂಟ್ಯೂಬ್ ಕಿರುಚಿತ್ರ ರೆಕಾರ್ಡ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇತ್ತೀಚೆಗೆ, ಉಜ್ಜಯಿನಿಯ ಮಹಾಕಾಲ ದೇವಾಲಯದ ಆವರಣದಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಹುಡುಗಿಯರು ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ರೀತಿ ಮಾಡಿರುವುದು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಕೆರಳಿಸಿದೆ. ಮಹಾಕಾಲ ದೇವಸ್ಥಾನದ ಗರ್ಭಗುಡಿಯಲ್ಲಿ ಬಾಲಕಿಯೊಬ್ಬಳು ಜಲಾಭಿಷೇಕ ಮಾಡುತ್ತಿರುವ ದೃಶ್ಯವನ್ನು ವೀಡಿಯೊ ಮಾಡಿದ್ದು, ದೇವಸ್ಥಾನದ ಆವರಣದ ಸುತ್ತಲೂ ಇತರ ಹುಡುಗಿಯರು ಬಾಲಿವುಡ್ ಹಾಡುಗಳಿಗೆ ಪೋಸ್ ನೀಡುತ್ತ ಮತ್ತು ನೃತ್ಯ ಮಾಡಿರುವುದು ರೀಲ್‌ನಲ್ಲಿದೆ
ವೀಡಿಯೊ ವೈರಲ್ ಆದ ನಂತರ, ಮಹಾಕಾಲ ದೇವಾಲಯದ ಅರ್ಚಕ ಮಹೇಶ್ ಗುರು, ರೀಲ್ಸ್ ಮಾಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ವೀಡಿಯೊವನ್ನು ಅವಹೇಳನಕಾರಿ ಮತ್ತು ಸನಾತನ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ರೀತಿಯ ವೀಡಿಯೊ ದೇವಾಲಯದ ಪಾವಿತ್ರ್ಯತೆಯನ್ನು ಹಾಳುಮಾಡಿದೆ. ಮಹಾಕಾಲ ದೇವಸ್ಥಾನದ ನೌಕರರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಅರ್ಚಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಂಗಳವಾರ ವಿಡಿಯೋವನ್ನು ಗಮನಿಸಿದ್ದು, ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್‌ಪಿಗೆ ಸೂಚಿಸಿದ್ದಾರೆ. ಯಾವುದೇ ರೀತಿಯಲ್ಲಿ ಧಾರ್ಮಿಕ ನಂಬಿಕೆಗಳೊಂದಿಗೆ ಗೊಂದಲ ಮೂಡಿಸುವುದನ್ನು ಸಹಿಸಲಾಗುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.