ಬೆಳಗಾವಿ: ಸಬ್ಸಿಡಿ ಹಣ ಬಿಡುಗಡೆಗೆ 50,000 ರೂ. ಲಂಚ ಪಡೆಯುತ್ತಿದ್ದ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರದ ಗಿರೀಶ ಕುಲಕರ್ಣಿ ಅವರಿಗೆ ಉದ್ಯಮ ಸ್ಥಾಪನೆಗಾಗಿ ಸರ್ಕಾರದ ಸಹಾಯಧನ ಯೋಜನೆ ಅಡಿಯಲ್ಲಿ ಸಬ್ಸಿಡಿ ಹಣ ಬಿಡುಗಡೆ ಮಾಡಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲವೆಂದು ಹೇಳಿದ್ದರು.
ಈ ಕುರಿತು ಗಿರೀಶ ಕುಲಕರ್ಣಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ನಿನ್ನೆ 50,000 ರೂ. ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಶಿವಪುತ್ರಪ್ಪ ಮತ್ತು ಸಹಾಯಕ ಜಂಟಿ ನಿರ್ದೇಶಕ ಪದ್ಮಾಕಾಂತ ಅವರನ್ನು ಬಂಧಿಸಿದ್ದಾರೆ.