ಅಕ್ಟೋಬರ್ 17 ರ ಸೋಮವಾರದಂದು ನಡೆದಿದ್ದ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಶಶಿ ತರೂರ್ ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಮೂಲಕ 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ನಲ್ಲಿ 24 ವರ್ಷಗಳ ಬಳಿಕ ಗಾಂಧಿಯೇತರ ವ್ಯಕ್ತಿಯೊಬ್ಬರು ಅಧ್ಯಕ್ಷರಾದಂತಾಗಿದೆ.
ಚಲಾವಣೆಯಾದ ಒಂಬತ್ತು ಸಾವಿರದ ಐನೂರು ಮತಗಳಲ್ಲಿ ಅತ್ಯಧಿಕ ಮತ ಪಡೆದು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದು, ಇದೀಗ ಎಐಸಿಸಿ ಅಧ್ಯಕ್ಷರಾಗಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಇತಿಹಾಸದಲ್ಲಿ ಇದು ಕೇವಲ 6 ನೇ ಬಾರಿ ನಡೆಯುತ್ತಿರುವ ಅಧ್ಯಕ್ಷ ಸ್ಥಾನದ ಚುನಾವಣೆಯಾಗಿದೆ. ಈ ಬಾರಿ ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
1998ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಜಿತೇಂದ್ರ ಪ್ರಸಾದ್ ಅವರನ್ನು ಸೋಲಿಸಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2017 ಡಿಸೆಂಬರ್ ನಲ್ಲಿ ರಾಹುಲ್ ಗಾಂಧಿಗೆ ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದರು. ಆದರೆ 2019ರಲ್ಲಿ ರಾಹುಲ್ ಗಾಂಧಿ ರಾಜೀನಾಮೆ ನೀಡಿದ್ದರು. ಅಂದಿನಿಂದ ಸೋನಿಯಾ ಗಾಂಧಿಯವರೇ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.