ಭೂ ವಿವಾದಗಳು ಸಾಮಾನ್ಯವಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಹಾರಾಷ್ಟ್ರದ ಗ್ರಾಮ ಒಂದರಲ್ಲಿ ಮಂಗಗಳ ಹೆಸರಿನಲ್ಲಿ 32 ಎಕರೆ ಜಮೀನು ಇದ್ದು, ಪ್ರಸ್ತುತ ಇಲ್ಲಿ ವಾಸವಿರುವವರು ಸಹ ಇದನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.
ಹೌದು, ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಉಪ್ಲಾ ಗ್ರಾಮ, ಮಂಗಗಳ ಹೆಸರಿನಲ್ಲಿ ಜಮೀನು ನೋಂದಾಯಿಸಿರುವ ಅಪರೂಪದ ಗೌರವಕ್ಕೆ ಪಾತ್ರವಾಗಿದೆ. ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಪತ್ತೆಯಾದ ಭೂ ದಾಖಲೆಗಳಲ್ಲಿ ಇದರ ಸ್ಪಷ್ಟ ಉಲ್ಲೇಖವಿದ್ದು, ಯಾರು ಹಾಗೂ ಯಾವ ಸಂದರ್ಭದಲ್ಲಿ ಇದನ್ನು ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ.
ಮೊದಲಿನಿಂದಲೂ ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷ ಗೌರವ ನೀಡಲಾಗುತ್ತಿದೆ ಎನ್ನಲಾಗಿದ್ದು, ಈ ಹಿಂದೆ ಗ್ರಾಮದಲ್ಲಿ ಮದುವೆ ನಡೆದ ಸಂದರ್ಭದಲ್ಲಿ ಮಂಗಗಳಿಗೆ ಮೊದಲು ಉಡುಗೊರೆ ನೀಡಿ ಬಳಿಕವೇ ಸಮಾರಂಭ ಆರಂಭವಾಗುತ್ತಿತ್ತು ಎಂದು ಹೇಳಲಾಗಿದೆ.
ಈಗ ಈ ಪದ್ಧತಿ ಇಲ್ಲವಾದರೂ ಸಹ ಗ್ರಾಮಸ್ಥರು ಮನೆಗಳ ಬಾಗಿಲಿಗೆ ಮಂಗಗಳು ಬಂದಾಗ ಆಹಾರ ನೀಡುತ್ತಾರೆ. ಪ್ರಸ್ತುತ ಗ್ರಾಮದಲ್ಲಿ 100 ಮಂಗಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ ಕಾರಣ ಇವುಗಳ ಸಂಖ್ಯೆ ಈಗ ಕ್ಷೀಣವಾಗುತ್ತಿದೆ ಎಂದು ಹೇಳಲಾಗಿದೆ.