ಕಟಕ್: ಒಡಿಶಾದ ಕಟಕ್ ನಗರದ ಜನನಿಬಿಡ ರಸ್ತೆಯಲ್ಲಿ 22 ವರ್ಷದ ವ್ಯಕ್ತಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಿಹಾಕಿ ಸುಮಾರು ಎರಡು ಕಿಲೋಮೀಟರ್ ಓಡಿಸಿರುವ ಅಮಾನವೀಯ ಘಟನೆ ನಡೆದಿದೆ. ಇದಕ್ಕೆ ಕಾರಣ, ಪಡೆದ 1,500 ರೂಪಾಯಿ ಹಣವನ್ನು ಪಾವತಿಸದೇ ಇರುವುದು !
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಕಟಕ್ ನಗರ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ತಿಳಿಸಿದ್ದಾರೆ. ಹೀಗೆ ಹಿಂಸೆಗೆ ಒಳಗಾಗಿರುವ ವ್ಯಕ್ತಿಯನ್ನು ಜಗನ್ನಾಥ್ ಬೆಹೆರಾ ಎಂದು ಗುರುತಿಸಲಾಗಿದೆ.
ಅವರ ಕೈಗಳನ್ನು 12 ಅಡಿ ಉದ್ದದ ಹಗ್ಗದಿಂದ ಕಟ್ಟಲಾಗಿತ್ತು, ಅದರ ಇನ್ನೊಂದು ತುದಿಯನ್ನು ದ್ವಿಚಕ್ರ ವಾಹನಕ್ಕೆ ಕಟ್ಟಲಾಗಿತ್ತು. ಸುಮಾರು 20 ನಿಮಿಷಗಳ ಕಾಲ ಸ್ಟುವರ್ಟ್ಪಟ್ನಾ ಚೌಕದಿಂದ ಸುತಾಹತ್ ಚೌಕದವರೆಗೆ ಎರಡು ಕಿಲೋಮೀಟರ್ಗೂ ಹೆಚ್ಚು ದೂರದವರೆಗೆ ಅವರನ್ನು ಓಡಿಸಿಕೊಂಡು ಹೋಗಲಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ತಿಂಗಳು ಜಗನ್ನಾಥ್ ಅವರು ಆರೋಪಿಗಳಿಂದ 1,500 ರೂ.ಗಳನ್ನು ತಮ್ಮ ಅಜ್ಜನ ಅಂತಿಮ ಸಂಸ್ಕಾರಕ್ಕಾಗಿ ಎರವಲು ಪಡೆದಿದ್ದರು. ಅದನ್ನು ವಾಪಸ್ ನೀಡದ ಕಾರಣ ಈ ರೀತಿ ಹಿಂಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.