ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ವಿಶೇಷ ತನಿಖಾ ತಂಡ ತನ್ನ ಆಂತರಿಕ ವರದಿಯಲ್ಲಿ ತಿಳಿಸಿದೆ.
ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಡ್ರಗ್ಸ್ ವಿರೋಧಿ ಸಂಸ್ಥೆಯ ಅಧಿಕಾರಿಗಳು ಮಾಡಿದ ಕೆಲಸದಲ್ಲಿ ಹಲವು ಲೋಪದೋಷಗಳು ಬಯಲಿಗೆ ಬಂದಿವೆ ಎಂದು ಹೇಳಲಾಗಿದೆ.
NCB ತನ್ನ ವರದಿಯಲ್ಲಿ ಏಜೆನ್ಸಿಯ ಏಳರಿಂದ ಎಂಟು ಅಧಿಕಾರಿಗಳ ಕಡೆಯಿಂದ “ಸಂಶಯಾಸ್ಪದ ನಡವಳಿಕೆ” ಕಂಡು ಬಂದಿದೆ ಎಂದು ಹೇಳಲಾಗಿದೆ.
ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯ ಹೊರತಾಗಿಯೂ ತನಿಖೆ ನಡೆಸಲಾಗುತ್ತಿದೆ. 65 ಜನರ ಹೇಳಿಕೆಗಳನ್ನು ನಾಲ್ಕು ಬಾರಿ ದಾಖಲಿಸಲಾಗಿದೆ, ಏಕೆಂದರೆ ಅವರು ತಮ್ಮ ಹೇಳಿಕೆಗಳನ್ನು ಆಗಾಗ್ಗೆ ಬದಲಾಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಕರಣದಲ್ಲಿ ಆರ್ಯನ್ ಖಾನ್ ಖುಲಾಸೆಗೊಂಡ ನಂತರ ಎನ್ಸಿಬಿ ವಿಶೇಷ ತಂಡದಿಂದ ತನಿಖೆಯನ್ನು ಪ್ರಾರಂಭಿಸಲಾಗಿತ್ತು. ವರದಿಯನ್ನು ದೆಹಲಿಯಲ್ಲಿರುವ ಬ್ಯೂರೋ ಮುಖ್ಯಸ್ಥರಿಗೆ ಸಲ್ಲಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಡ್ರಗ್ಸ್ ಪಿತೂರಿ ಮತ್ತು ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಬಂಧಿಸಿತ್ತು. ವಿಚಾರಣೆಯ ನಂತರ, ಆರ್ಯನ್ ಖಾನ್ನಿಂದ ಯಾವುದೇ ಡ್ರಗ್ಸ್ ಪತ್ತೆಯಾಗದಿದ್ದರೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅಂತಿಮವಾಗಿ ಅಕ್ಟೋಬರ್ 28 ರಂದು ಬಾಂಬೆ ಹೈಕೋರ್ಟ್ ಆರ್ಯನ್ಗೆ ಜಾಮೀನು ನೀಡಿತು.
ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಕೈಬಿಡಲು 25 ಕೋಟಿ ರೂಪಾಯಿಗಳ ಡೀಲ್ ಕುರಿತು ಇಬ್ಬರು ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ ಎಂದು ಸಾಕ್ಷಿಯೊಬ್ಬರು ಹೇಳಿಕೆ ನೀಡಿದ ನಂತರ ಬಿರುಗಾಳಿ ಎಬ್ಬಿಸಿತ್ತು.