ದೀಪಗಳ ಹಬ್ಬ ದೀಪಾವಳಿಯಲ್ಲಿ ಗೋ ಪೂಜೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ದೀಪಾವಳಿಯನ್ನ ಗೋವಿನ ಹಬ್ಬ ಅಂತಲೂ ಕರೆಯುವುದು ಉಂಟು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತ ಅನಾದಿ ಕಾಲದಿಂದಲೂ ಗೋ ಸಂಕುಲವನ್ನೇ ಅವಲಂಬಿಸಿದ್ದಾನೆ.
ಗೋವಿಲ್ಲದೆ ತನ್ನ ಹೊಟ್ಟೆಗೆ ಅನ್ನವಿಲ್ಲ ಎಂಬ ಸತ್ಯ ದೇಶದ ನೆಲದಲ್ಲಿಯೇ ಅಡಕವಾಗಿರುವ ಕಾರಣ ಗೋವನ್ನು ದೈವ ಸ್ವರೂಪಿ ಎನ್ನಲಾಗುತ್ತದೆ. ರೈತಾಪಿ ಜನರ ಜೀವನಾಡಿಯಾಗಿರುವ ಗೋವನ್ನ ಪೂಜಿಸುವ ಸಂಪ್ರದಾಯ ಕೂಡ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ವರ್ಷಪೂರ್ತಿ ರೈತನಿಗೆ ಸಹಕರಿಸುವ ಗೋವುಗಳನ್ನ ಗೌರವಿಸುವುದಕ್ಕೆ ದೀಪಾವಳಿಯೆಂಬ ಸುದಿನವನ್ನ ನಮ್ಮ ದೇಶ ಆಯ್ದುಕೊಂಡಿದೆ.
ದೀಪಾವಳಿಯ ಮೂರನೇಯ ದಿನ ಅಂದರೆ, ಬಲಿ ಪಾಡ್ಯಮಿಯ ದಿನ ರೈತಾಪಿ ಜನರ ಮನೆಯಲ್ಲಿ, ಮತ್ತು ಹಳೆಯ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಸಂಪ್ರದಾಯಸ್ಥರ ಮನೆಯಲ್ಲಿ ಗೋ ಪೂಜೆಯನ್ನ ನೆರವೇರಿಸಲಾಗುತ್ತದೆ.
ಮನೆಯ ಹಟ್ಟಿಯಲ್ಲಿರುವ ಜಾನುವಾರುಗಳನ್ನು ಶುಚಿಗೊಳಿಸಿ ಹೂವು-ಹಾರಗಳಿಂದ ಶೃಂಗರಿಸಿ, ಅವುಗಳ ಮೈಮೇಲೆ ಬಣ್ಣಗಳಿಂದ ಚಿತ್ತಾರ ಬಿಡಿಸಿ ಪೂಜೆಗೆ ಸಿದ್ಧಗೊಳಿಸುತ್ತಾರೆ. ಗೋ ಪೂಜೆಗೋಸ್ಕರವೇ ವಿಶೇಷ ಗೋ ಗ್ರಾಸವನ್ನ (ಗೋವಿಗಾಗಿಯೇ ತಯಾರಿಸಿದ ವಿಶೇಷ ಆಹಾರ) ಸಿದ್ಧಪಡಿಸಿ ಗೋವಿಗೆ ನೀಡಿ ಶ್ರದ್ಧೆ-ಭಕ್ತಿಯಿಂದ ಆರಾಧಿಸಿ ಸಂತಸಪಡುತ್ತಾರೆ.
ದೀಪಾವಳಿಯ ಪೂಜೆಗಾಗಿ ಅರಶಿನ ಎಲೆಯಲ್ಲಿ ಮಾಡಿದ ಕಡಬನ್ನು ಗೋವಿಗೆ ಮೊದಲು ನೀಡಿ ಆನಂತರ ಮನೆಯವರೆಲ್ಲ ಊಟ ಮಾಡುವುದು ಕ್ರಮ. ಅಲ್ಲದೇ ಗದ್ದೆಯಿಂದ ತೆಗೆದ ಫಸಲನ್ನು ಗೋ ಪೂಜೆಯ ದಿನ ಗೋವುಗಳಿಗೆ ನೀಡಲಾಗುತ್ತದೆ. ಗೋವು ಅದನ್ನು ತಿಂದು ಸಂತೋಷದಿಂದ ಅಂಬಾ ಎಂದು ಕೂಗಿದರೆ ಅದು ಶುಭ ಸೂಚಕ.
ಕೃಷ್ಣನಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅದಕ್ಕಾಗಿಯೇ ಗೋಪಾಲ ಎಂಬ ಹೆಸರೂ ಕೂಡ ಶ್ರೀಕೃಷ್ಣನಿಗಿದೆ. ದೀಪಾವಳಿಯ ಮೂರನೇ ದಿನ ನೆರವೇರುವ ಗೋಪೂಜೆಯಂದು ಎಲ್ಲರೂ ಗೋವರ್ಧನ ಪರ್ವತವನ್ನು ಪ್ರದಕ್ಷಿಣೆ ಮಾಡಿ ಗೋಪಾಲಕೃಷ್ಣನನ್ನು ಆರಾಧಿಸುವ ಸಂಪ್ರದಾಯವೂ ಇದೆ. ಪ್ರತಿ ಊರು, ಗ್ರಾಮಗಳಲ್ಲಿಯ ಎಲ್ಲರ ಮನೆಯ ಕೊಟ್ಟಿಗೆಯಲ್ಲಿರುವ ಗೋವುಗಳೆಲ್ಲವನ್ನೂ ಶೃಂಗರಿಸಿ ಆ ಊರಿನ ಬಯಲಿಗೆ ಬಿಟ್ಟು ಅದನ್ನೇ ಗೋವರ್ಧನ ಪರ್ವತ ಎಂದು ನಂಬಿ ಎಲ್ಲರೂ ಗೋವುಗಳಿರುವ ಬಯಲಿಗೆ ಬಂದು ಅವುಗಳ ಆಟ- ಪಾಠಗಳನ್ನು ಕಣ್ತುಂಬಿಕೊಳ್ಳುತ್ತಾರೆ.
ಊರವರೆಲ್ಲ ಒಟ್ಟಾಗಿ ಸೇರಿ ಗ್ರಾಮದೇವತೆಯನ್ನ ಆರಾಧಿಸಿ, ತಮ್ಮ ತಮ್ಮ ಹೊಲದ ಹೊಸ ಫಸಲುಗಳ ಪೂಜೆ ಮಾಡಿ, ತಮ್ಮ ತಮ್ಮ ಗೋವುಗಳೊಂದಿಗೆ ಹಿಂದಿರುಗುತ್ತಾರೆ. ಇನ್ನು ಗೋವರ್ಧನ ಪರ್ವತಕ್ಕೆ ಹೋಗಲಾರದಿದ್ದವರು ಆ ಪರ್ವತದ ಚಿತ್ರವನ್ನಾಗಲಿ, ವಿಗ್ರಹವನ್ನಾಗಲಿ ಹಸುವಿನ ಸಗಣಿಯಿಂದಾಗಲಿ ಅಥವಾ ಅನ್ನದಿಂದಾಗಲಿ ರಚಿಸಿ ಪೂಜಿಸಬೇಕು ಎಂಬ ಸಂಪ್ರದಾಯವಿದೆ.
ಸದಾ ರೈತರ ಸಂಗಾತಿಯಾಗಿರುವ ಗೋ ಸಂಕಲುಕ್ಕೆ ನಾವೆಷ್ಟು ಆಭಾರಿಯಾಗಿದ್ದರೂ ಸಾಲದು. ದೀಪಾವಳಿಯಲ್ಲಿ ನೆರವೇರುವ ಗೋಪೂಜೆಯ ಸಂಸ್ಕೃತಿಯತ್ತ ಯುವ ಮನಸ್ಸುಗಳು ಆಸಕ್ತಿ ತೋರಿಸಲಿ. ವಾಸ್ತವದಲ್ಲಿ ಕೇವಲ ಹಳ್ಳಿಗಳಲ್ಲಿ ಮಾತ್ರ ಕಂಡು ಬರುವ ಇಂಥ ಆಚರಣೆಗಳು, ಸಂಪ್ರದಾಯಗಳು ಭವಿಷ್ಯದಲ್ಲಿಯೂ ಕೂಡ ಆಚರಣೆಯಲ್ಲಿರಲಿ. ಈ ಮೂಲಕ ಮುಂದಿನ ಪೀಳಿಗೆಗಳಿಗೂ ಇಂಥ ಸಂಸ್ಕೃತಿಗಳ ಪರಿಚಯವಾಗಲಿ ಎಂಬುದು ಎಲ್ಲರ ಆಶಯ.