ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಕಳೆದ 15 ದಿನಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಖಾದ್ಯ ತೈಲ ಬೆಲೆಯಲ್ಲೂ ಹೆಚ್ಚಳವಾಗಿದೆ.
ಮಾರುಕಟ್ಟೆ ಮೂಲಗಳ ಪ್ರಕಾರ ಕಳೆದ ವಾರದಲ್ಲಿ ತಾಳೆ ಎಣ್ಣೆ ಬೆಲೆ 10 ರಿಂದ 12 ರೂಪಾಯಿ, ಸೋಯಾಬಿನ್ ಆಯಿಲ್ ಬೆಲೆ 14 ರಿಂದ 16 ರೂಪಾಯಿ ಹಾಗೂ ಸೂರ್ಯಕಾಂತಿ ಎಣ್ಣೆ ಬೆಲೆ ಪ್ರತಿ ಲೀಟರ್ ಗೆ 18 ರಿಂದ 20 ರೂಪಾಯಿ ಚಿಲ್ಲರೆ ಮಾರಾಟದಲ್ಲಿ ಏರಿಕೆಯಾಗಿದೆ. OPEC ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ಘೋಷಣೆ ಮಾಡಿದ ಬಳಿಕ ಇದು ಕಚ್ಚಾ ತೈಲದ ಬೆಲೆ ಮೇಲೆ ಪರಿಣಾಮ ಬೀರಿದೆ.
ಭಾರತವು ಶೇಕಡಾ 70ರಷ್ಟು ತೈಲವನ್ನು ಅಮದು ಮಾಡಿಕೊಳ್ಳುತ್ತಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದು ಸಹ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಅಲ್ಲದೆ ರಷ್ಯಾ – ಉಕ್ರೇನ್ ಯುದ್ಧವೂ ಸೂರ್ಯಕಾಂತಿ ಎಣ್ಣೆಯ ಪೂರೈಕೆಗೆ ಅಡ್ಡಿಯಾಗಿದ್ದು, ಬೆಲೆಯೂ ಹೆಚ್ಚಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಗಿರುವ ಈ ಬೆಲೆ ಏರಿಕೆ, ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದೊಡ್ಡಿದೆ.