ಇಂಜಿನಿಯರಿಂಗ್ ಪ್ರವೇಶ ಬಯಸಿರುವ ಸಿಇಟಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾವಕಾಶದ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಈ ವಿಷಯ ತಿಳಿಸಿದ್ದು, ಈ ಮುನ್ನ ಎಐಸಿಟಿಇ ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಅಕ್ಟೋಬರ್ 25 ಅಂತಿಮ ದಿನಾಂಕವಾಗಿ ನಿಗದಿ ಮಾಡಿತ್ತು. ಇದನ್ನು ವಿಸ್ತರಿಸಲು ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ಇದನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ಒಂದು ತಿಂಗಳಿಗಿಂತ ಅಧಿಕ ಕಾಲಾವಕಾಶ ಸಿಕ್ಕಿರುವುದರಿಂದ ಕೌನ್ಸೆಲಿಂಗ್ ಸೇರಿದಂತೆ ಪ್ರವೇಶ ಪ್ರಕ್ರಿಯೆಗಳು ಸುಗಮವಾಗಿ ನಡೆಯಲಿದೆ ಎಂದು ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ. ರಾಂಕಿಂಗ್ ನೀಡುವ ವಿಚಾರದಲ್ಲಿ ಕಳೆದ ವರ್ಷ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ ಸಿಇಟಿ ಪ್ರವೇಶ ಪ್ರಕ್ರಿಯೆ ವಿಳಂಬವಾಗಿತ್ತು. ಹೀಗಾಗಿ ಅಂತಿಮ ದಿನಾಂಕ ವಿಸ್ತರಿಸಲು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿತ್ತು.