ಶ್ರೀಮಂತರು ದೇವಾಲಯಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುವುದು ಹೊಸ ವಿಚಾರವೇನಲ್ಲ. ಹಾಗೆಯೇ ಹರಕೆ ಹೆಸರಿನಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೇವರಿಗೆ ಸಮರ್ಪಿಸಿದ ನಿದರ್ಶನಗಳೂ ಇವೆ. ಇದರ ಮಧ್ಯೆ ಇಲ್ಲೊಂದು ಪ್ರಕರಣ ವಿಭಿನ್ನ ಕಾರಣಗಳಿಗೆ ಗಮನ ಸೆಳೆಯುತ್ತಿದೆ.
ಹೌದು, ವೃದ್ಧ ಮಹಿಳೆಯೊಬ್ಬರು ತಾವು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಮುಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಅನ್ನದಾನ ಕಾರ್ಯಕ್ರಮಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕುಂದಾಪುರ ತಾಲೂಕು ಸಾಲಿ ಗ್ರಾಮದ ನಿವಾಸಿ ಅಶ್ವತ್ಥಮ್ಮ ಎಂಬವರೇ ಈ ವೃದ್ದ ಮಹಿಳೆಯಾಗಿದ್ದಾರೆ.
ಮತ್ತೊಂದು ಮಹತ್ವದ ಸಂಗತಿ ಎಂದರೆ ಅವರು ಈಗಾಗಲೇ ಹಲವು ದೇಗುಲಗಳಿಗೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಅಶ್ವತ್ಥಮ್ಮ, ಅವರುಗಳು ನಿಧನ ಹೊಂದಿದ ಬಳಿಕ ಸಮಾಜಕ್ಕೆ ಏನಾದರೂ ಕೊಡುಗೆ ಸಲ್ಲಿಸಬೇಕೆಂಬ ದೃಢ ನಿರ್ಧಾರ ಕೈಗೊಂಡು ದಿನನಿತ್ಯ ಭಿಕ್ಷೆ ಬೇಡಿ ಸಂಗ್ರಹಿಸಿದ ಈ ಹಣವನ್ನು ಪಿಗ್ಮಿಯಲ್ಲಿಟ್ಟು ಈಗ ದೇಣಿಗೆ ನೀಡಿದ್ದಾರೆ.