ಚೆಕ್ ಬೌನ್ಸ್’ ಪ್ರಕರಣಗಳಲ್ಲಿ ಆರೋಪಿ ಹೇಳಿಕೆ ದಾಖಲಿಸಿಕೊಳ್ಳುವಾಗ ದೂರುದಾರರ ಹಾಜರಿ ಅನಿವಾರ್ಯವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಕಾರಣಕ್ಕಾಗಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಪ್ರಕರಣದ ವಿವರ: 2013ರಲ್ಲಿ ಈಶ್ವರ್ ಎಂಬವರು ನಾಗರಾಜ್ ಅವರಿಂದ 4.50 ಲಕ್ಷ ರೂಪಾಯಿ ಸಾಲ ಪಡೆದು ಇದಕ್ಕೆ ಭದ್ರತೆಯಾಗಿ ಚೆಕ್ ನೀಡಿದ್ದರು. ಆದರೆ ಈ ಚೆಕ್, ಬೌನ್ಸ್ ಆದ ಕಾರಣ ನಾಗರಾಜ್ ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಆದರೆ ಆರೋಪಿ ಈಶ್ವರ್ ದೀರ್ಘಕಾಲ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಹೀಗಾಗಿ 2018ರಲ್ಲಿ ನ್ಯಾಯಾಲಯದ ಮುಂದೆ ಹಾಜರಾದ ಈಶ್ವರ್ ಜಾಮೀನು ಪಡೆದುಕೊಂಡಿದ್ದರು.
ನಂತರ ವಿಚಾರಣಾ ನ್ಯಾಯಾಲಯ ಆರೋಪಿ ಈಶ್ವರ್ ಅವರ ಹೇಳಿಕೆಗೆ ದಿನಾಂಕ ನಿಗದಿಪಡಿಸಿದ್ದು, ಆದರೆ ಆ ದಿನದಂದು ದೂರುದಾರ ನಾಗರಾಜ್ ಹಾಜರಾಗಿರಲಿಲ್ಲ. ಈ ಹಿನ್ನಲೆಯಲ್ಲಿ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿದ್ದು, ಇದನ್ನು ಪ್ರಶ್ನಿಸಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ್ದು, ಪ್ರಕರಣವನ್ನು ವಾಪಾಸ್ ಹಿಂದಿರುಗಿಸಲಾಗಿದೆ. ಅಲ್ಲದೆ ಇದೇ 21ರಂದು ಆರೋಪಿ ಮತ್ತು ದೂರುದಾರರು ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದು, ರದ್ದುಪಡಿಸಿದ ಹಂತದಿಂದ ವಿಚಾರಣೆಯನ್ನು ಪುನಃ ಮುಂದುವರಿಸಬೇಕು ಎಂದು ನಿರ್ದೇಶಿಸಿದೆ.