ಕಾಲೇಜು ಕಾಂಪೌಂಡ್ ಹತ್ತುವುದು, ಹಾರುವುದು ಕೆಲ ಹುಡುಗರಿಗೆ ಹೊಸ ವಿಷ್ಯ ಏನಲ್ಲ. ಪೊಲೀಸರು ಹಾಗೂ ಕಾಲೇಜು ವ್ಯವಸ್ಥೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು, ಪುಂಡರು ಮಾತ್ರ ತಮ್ಮ ಬುದ್ಧಿ ಮಾತ್ರ ಬಿಡುತ್ತಿಲ್ಲ. ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದಲ್ಲೂ ಇಂತಹದ್ದೊಂದು ಪ್ರಕರಣ ನಡೆದಿರೋದು ಬೆಳಕಿಗೆ ಬಂದಿದೆ.
ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಕಾಲೇಜಿನ ಆವರಣ ಗೋಡೆ ಹತ್ತಿದ ಆರೋಪದಲ್ಲಿ ಅಪರಿಚಿತರ ವಿರುದ್ಧ ದೆಹಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ದೀಪಾವಳಿ ಕಾರ್ಯಕ್ರಮವನ್ನು ವೀಕ್ಷಿಸಲು ಹಲವು ಮಂದಿ ಪುರುಷರು ಮಿರಾಂಡ ಹೌಸ್ ಮಹಿಳಾ ಕಾಲೇಜಿನ ಆವರಣ ಗೋಡೆ ಏರಿ ನಿಂತಿದ್ದರು ಮತ್ತು ತಮ್ಮನ್ನು ಛೇಡಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
‘ಹಲವು ಮಂದಿ ಕಾಲೇಜಿನ ಆವರಣ ಗೋಡೆ ಹತ್ತಿ ನಿಂತಿರುವ ದೃಶ್ಯಾವಳಿಯಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು. ಇವುಗಳನ್ನು ಪರಿಶೀಲಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರವಾಗಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪೊಲೀಸರಿಗೆ ಮತ್ತು ಕಾಲೇಜು ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.