ಇರಾನ್ ಮಹಿಳೆಯರ ಹಿಜಾಬ್ ವಿರುದ್ದದ ಪ್ರತಿಭಟನೆಗೆ ವಿಶ್ವದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಗೆ ವಿವಿಧ ದೇಶಗಳ ಮಹಿಳೆಯರು ಬೆಂಬಲ ಸೂಚಿಸುತ್ತಿದ್ದಾರೆ. ಇರಾನ್ ಮಹಿಳೆಯರ ಹೋರಾಟ ತೀವ್ರ ಸ್ವರೂಪ ಪಡೆದು ಒಂದು ತಿಂಗಳು ಕಳೆದಿದೆ. ಈ ವೇಳೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡಾ ಸಪೋರ್ಟ್ ಕೊಟ್ಟಿದ್ದಾರೆ.
ಇತ್ತೀಚೆಗೆ ನಟಿ ಊರ್ವಶಿ ರೌಟೇಲಾ ತಮ್ಮ ಕೂದಲು ಕತ್ತರಿಸಿಕೊಳ್ಳುವ ಮೂಲಕ ಈ ಪ್ರತಿಭಟನೆಗೆ ಬೆಂಬಲ ಕೊಟ್ಟಿದ್ದಾರೆ. ಅಲ್ಲದೇ, ಒಟ್ಟಾರೆ ಬೆಳವಣಿಗೆಯ ಕುರಿತು ತಮ್ಮ ಅಭಿಪ್ರಾಯ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ ಕೂಡ. ಜೊತೆಗೆ ತಮ್ಮ ಕೂದಲು ಕತ್ತರಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
“ ನಾನು ಕೂದಲನ್ನ ಕತ್ತರಿಸಿಕೊಂಡಿದ್ದೇನೆ. ಮಹ್ಸಾ ಅಮಿನಿ ಹತ್ಯೆ ನಂತರ ಶುರುವಾದ ಹಿಜಾಬ್ ವಿರುದ್ಧದ ಹೋರಾಟದಲ್ಲಿ ನಿಧನರಾದ ಮಹಿಳೆಯರಿಗೆ ಬೆಂಬಲ ನೀಡಲು ಹಾಗೂ ಉತ್ತರಾಖಂಡದ 19ರ ಪ್ರಾಯದ ಯುವತಿ ಅಂತಿಕಾ ಭಂಡಾರಿ ಸಲುವಾಗಿ ಹೀಗೆ ಮಾಡಿದ್ದೇನೆ. ಕೂದನ್ನು ಕತ್ತರಿಸಿಕೊಳ್ಳುವ ಮೂಲಕ ಜಗತ್ತಿನಾದ್ಯಂತ ಇರುವ ಮಹಿಳೆಯರು ಇರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಒಗ್ಗೂಡುತ್ತಿದ್ದಾರೆ. ಮಹಿಳೆಯರಿಗೆ ಗೌರವ ನೀಡಿ‘ ಎಂದು ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.
‘ಕೂದಲನ್ನು ಮಹಿಳೆಯರ ಸೌಂದರ್ಯದ ಸಂಕೇತದ ರೀತಿ ನೋಡಲಾಗುತ್ತದೆ. ಸಾರ್ವಜನಿಕವಾಗಿ ಕೂದಲನ್ನು ಕತ್ತರಿಸಿಕೊಳ್ಳುವ ಮೂಲಕ ಸಮಾಜ ಹೇರಿರುವ ಸೌಂದರ್ಯದ ಪರಿಕಲ್ಪನೆಯನ್ನು ತಾವು ಕೇರ್ ಮಾಡುವುದಿಲ್ಲ, ಎಂದು ಮಹಿಳೆಯರು ತೋರಿಸುತ್ತಿದ್ದಾರೆ. ಹೇಗೆ ಬಟ್ಟೆ ಹಾಕಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಬದುಕಬೇಕು ಎಂಬುದನ್ನು ಬೇರೆ ಯಾರೋ ನಿರ್ಧರಿಸಲು ಸಾಧ್ಯವಿಲ್ಲ. ಮಹಿಳೆಯರೂ ಒಗ್ಗೂಡಿದರೆ ಸ್ತ್ರೀವಾದಕ್ಕೆ ಹೊಸ ಶಕ್ತಿ ಬರುತ್ತದೆʼ ಎಂದು ಊರ್ವಶಿ ರೌಟೇಲಾ ಪೋಸ್ಟ್ ಮಾಡಿದ್ದಾರೆ.
ನಟಿಯಾಗಿ, ಮಾಡೆಲ್ ಆಗಿ ಊರ್ವಶಿ ರೌಟೇಲಾ ಬ್ಯುಸಿ ಆಗಿದ್ದಾರೆ. ಬಾಲಿವುಡ್ನಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಇನ್ಸ್ಸ್ಟಾಗ್ರಾಮ್ನಲ್ಲಿ ಅವರನ್ನು 5.8ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.