ಮಂಗಳೂರು: ಮಂಗಳೂರು, ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟಕ್ಕೆ ಮುಂದಾಗಿರುವ ಸಾರ್ವಜನಿಕರು ನಾಳೆ ಟೋಲ್ ಗೇಟ್ ಕಿತ್ತೆಸೆಯುವ ಕಾರ್ಯಾಚಾರಣೆಗೆ ಕರೆ ಕೊಟ್ಟಿದ್ದಾರೆ. ಈ ನಡುವೆ ಹೋರಾಟಗಾರರಿಗೆ ಬಿಜೆಪಿ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಶಾಂತಿಯುತ ಹೋರಾಟಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ನೇರವಾಗಿ ಟೋಲ್ ಗೇಟ್ ಕಿತ್ತೆಸೆಯಲೆಂದು ನಾಳೆ ಕರೆ ಕೊಟ್ಟಿರುವ ಕ್ರಮ ಸರಿಯಲ್ಲ. ಕಾನೂನು ಕೈಗೆತ್ತಿಕೊಂಡರೆ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಟೋಲ್ ಗೇಟ್ ತೆರವಿಗೆ ನಾನೂ ಕೂಡ ಸಿದ್ಧ. 20 ದಿನಗಳ ಕಾಲಾವಕಾಶ ಕೊಡಿ. ಕಾರಣ ಏಕಾಏಕಿ ಟೋಲ್ ಗೇಟ್ ತೆರವಿಗೆ ಕಾನೂನು ಸಮಸ್ಯೆಯಿದೆ. ಹಾಗಾಗಿ ಹೆದ್ದಾರಿ ಪ್ರಾಧಿಕಾರ 20 ದಿನಗಳ ಕಾಲಾವಕಾಶ ಕೇಳಿದೆ. ಹೀಗಿರುವಾಗ ಕಾಲಾವಕಾಶ ಕೊಡಬೇಕಿರುವುದು ನಮ್ಮ ಕರ್ತವ್ಯ. ಈಗ ಹೋರಾಟ ಕೈ ಬಿಟ್ಟು 20 ದಿನ ಹೋರಾಟ ಮುಂದೂಡಿ ಎಂದು ಮನವಿ ಮಾಡಿದರು.