ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲನ್ನು ಈಗ ಮತ್ತೆ ತೆರೆಯಲಾಗಿದ್ದು, ಭಾನುವಾರದಂದು ರಾಜಕಾರಣಿಗಳು, ಸಿನಿಮಾ ಕಲಾವಿದರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಬೆಳಗ್ಗೆ 6:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆವರೆಗೆ ಹಾಗೂ ಮಧ್ಯಾಹ್ನ 3:30 ರಿಂದ ರಾತ್ರಿ 10 ಗಂಟೆಯವರೆಗೆ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ವೃದ್ಧರು, ಮಕ್ಕಳು, ನವದಂಪತಿ ಸೇರಿದಂತೆ ಬಹುತೇಕರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದಿದ್ದು ವಿಶೇಷ.
ಸಂಸದ ಪ್ರಜ್ವಲ್ ರೇವಣ್ಣ ಸಹ ಭಾನುವಾರದಂದು ದೇವಿಯ ದರ್ಶನ ಪಡೆದಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಆರ್. ಗಿರೀಶ್ ರವರು ಸಹ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರು. ಅಲ್ಲದೆ ನಟ ಕೆ.ಆರ್. ಪೇಟೆ ಶಿವರಾಜ್ ದೇವರ ದರ್ಶನಕ್ಕಾಗಿ ಬಂದಿದ್ದರು. ಭಾನುವಾರ ರಜಾ ದಿನವಾಗಿದ್ದ ಕಾರಣ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ ಎಂದು ಹೇಳಲಾಗಿದೆ.