ಬಳ್ಳಾರಿ: ಬಳ್ಳಾರಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ನಾಯಕರ ಭಾರತ್ ಜೋಡೋ ಸಮಾವೇಶ ಸರ್ಕಸ್ ತರಹ ಇತ್ತು ಎಂದು ಸಚಿವ ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭಾರತ್ ಜೋಡೋ ಸಮಾವೇಶ ಸರ್ಕಸ್ ತರಹ ಇತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಸ್ ಕಂಪನಿಯ ಜೋಕರ್ ತರಹ ಕಾಣುತ್ತಿದ್ದರು. ಉತ್ತರ ಕುಮಾರನಂತೆ ಕಂಡುಬಂದರು ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಸಿಎಂ ಬೊಮ್ಮಾಯಿ ಅವರನ್ನು ಬಿಟ್ಟು ಬೇರೆ ಯಾರ ಬಗ್ಗೆಯೂ ಮಾತನಾಡಿಲ್ಲ. ಬರಿ ಚಕ್ರವ್ಯೂಹದಲ್ಲಿ ಸಿಲುಕಿದವರಂತೆ ಮೂವರ ಹೆಸರನ್ನು ಮಾತ್ರ ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ಪೆದ್ದ ಎಂದು ಸಿದ್ದರಾಮಯ್ಯ ಕರೆದಿದ್ದಾರೆ. ಆದರೆ ನಾನು ಅವರ ರಾಹುಲ್ ಗಾಂಧಿಯಷ್ಟು ಪೆದ್ದನಲ್ಲ. ಸಿದ್ದರಾಮಯ್ಯ ಬಹಳ ಜಾಣ ಇರಬಹುದು. ಸಂಡೆ-ಮಂಡೆ ವಕೀಲಗಿರಿ ಮಾಡಿಕೊಂಡು ಬಂದವರು. ಒಬ್ಬ ಅವಕಾಶವಾದಿ, ದುಷ್ಟ, ರಾಕ್ಷಸ ರಾಜಕಾರಣಿ ಸಿದ್ದರಾಮಯ್ಯ. ಸಿದರಾಮಯ್ಯ ಏನ್ ಸಾಧಿಸಿದ್ದಾರೆ? ಇವರದ್ದೇ ಸರ್ಕಾರ ಇತ್ತು. ಆಗ ಯಾಕೆ ಮೀಸಲಾತಿ ಹೆಚ್ಚಳ ಮಾಡಿಲ್ಲ? ಈಗ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಯಾವ ನಂಬಿಕೆ ದ್ರೋಹ ಮಾಡಿಲ್ಲ. ಅನ್ನ ಕೊಟ್ಟ ಮನೆಗೆ ಮೋಸ ಮಾಡಿಲ್ಲ. ಮೋಸ ಮಾಡಿ ರಾಜಕಾರಣ ಮಾಡಿದವನೂ ನಾನಲ್ಲ. ಸಿದ್ದರಾಮಯ್ಯ ಅಹಿಂದ ಮುಖವಾಡ ಇಟ್ಟುಕೊಂಡು ಖರ್ಗೆ ಅವರನ್ನು ತುಳಿದರು. ಪರಮೇಶ್ವರ ಅವರನ್ನು ಸೋಲಿಸಿದರು. ಈಗ ಡಿಕೆಶಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ದಾಖಲೆ ಇಟ್ಟುಕೊಂಡು ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹಿಗ್ಗಾ ಮುಗ್ಗಾ ಕಿಡಿಕಾರಿದ್ದಾರೆ.