ICC T20 ವಿಶ್ವಕಪ್ 2022 ಎ ಗುಂಪಿನ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ನೀಡಿದ ನಮೀಬಿಯಾ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾವನ್ನು 55 ರನ್‌ಗಳಿಂದ ಸೋಲಿಸಿದೆ.
ಶ್ರೀಲಂಕಾ ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನದಂತ ತಂಡಗಳನ್ನು ಸೋಲಿಸಿ ಏಷ್ಯಾಕಪ್ ಪ್ರಶಸ್ತಿ ಪಡೆದಿತ್ತು. ಟಿ20 ವಿಶ್ವಕಪ್ ನಲ್ಲಿ ಫೇವರಿಟ್ ತಂಡವಾಗಿರುವ ಶ್ರೀಲಂಕಾ ಸೋಲು ಕಂಡಿದೆ. ಗೀಲಾಂಗ್‌ನಲ್ಲಿ ಭಾನುವಾರ ನಮೀಬಿಯಾ ವಿರುದ್ಧ 55 ರನ್‌ಗಳಿಂದ ಸೋತ ನಂತರ ಲಂಕಾ ದಿಗ್ಭ್ರಮೆಗೊಂಡಿದೆ.
ಗೆರ್ಹಾರ್ಡ್ ಎರಾಸ್ಮಸ್ ನೇತೃತ್ವದ ತಂಡವು T20 ವಿಶ್ವಕಪ್ 2022 ರ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿತು. ಈಗ A ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ನಮಿಬಿಯಾ ಆಟಗಾರರು ಶ್ರೀಲಂಕಾವನ್ನು ಸೋಲಿಸಿದ ರೀತಿ ನಮೀಬಿಯಾಗೆ ಒಂದು ಕಾಲ್ಪನಿಕ ಕಥೆಗಿಂತ ಕಡಿಮೆಯೇನಿಲ್ಲ. ತಮ್ಮ ಇನ್ನಿಂಗ್ಸ್ ಗೆ ಕಳಪೆ ಆರಂಭದ ನಂತರ, ಜಾನ್ ಫ್ರಿಲಿಂಕ್ ಮತ್ತು ಜೆಜೆ ಸ್ಮಿತ್ ಜೋಡಿಯು 70 ರನ್‌ಗಳ ಜೊತೆಯಾಟವನ್ನು ನಿರ್ಮಿಸಿ, ಅವರ ತಂಡವು ಶ್ರೀಲಂಕಾಕ್ಕೆ 164 ರನ್‌ಗಳ ಸವಾಲಿನ ಗುರಿಯನ್ನು ನೀಡಲು ಸಹಾಯ ಮಾಡಿದರು.
ಲಂಕಾ ಬ್ಯಾಟ್ಸ್ ಮನ್ ಗಳು ತಪ್ಪಾದ ಹೊಡೆತಗಳನ್ನು ಆಡುತ್ತಾ ಕ್ಯಾಚ್ ಗೆ ಸಿಲುಕಿದ್ದರಿಂದ ಆಟಕ್ಕೆ ಮಹತ್ವದ ತಿರುವು ಸಿಕ್ಕಿತು. ಶ್ರೀಲಂಕಾ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 108 ರನ್‌ಗಳಿಗೆ ಆಲೌಟ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ನಮಿಬಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ನಮಿಬಿಯಾ ಪರವಾಗಿ ಜಾನ್ ಫ್ರೆಲಿಂಕ್ 44, ಜೆಜೆ ಸ್ಮಿತ್ 31, ಸ್ಟೇಫನ್ ಬಾರ್ಡ್ 26 ರನ್ ಗಳಿಸಿದರು. ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ 19 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 108 ರನ್ ಗಳಿಸಿ ಸೋಲು ಕಂಡಿದೆ. ಶ್ರೀಲಂಕಾ ಪರವಾಗಿ ದಾಸುನ್ ಶನಕ 29, ಭಾನುಕ ರಾಜಪಕ್ಸ 20, ಧನಂಜಯ ಡಿಸಿಲ್ವಾ 12 ಹೊರತುಪಡಿಸಿ ಉಳಿದವರು ಎರಡು ಅಂಕಿ ತಲುಪಲಿಲ್ಲ.