ಯಾದಗಿರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜೋಡೆತ್ತುಗಳಲ್ಲಿ ಒಂದು ಏರಿಗೆ, ಮತ್ತೊಂದು ನೀರಿಗೆ ಎಳೆಯುತ್ತಿವೆ. ಇದನ್ನು ಕಾಂಗ್ರೆಸ್ ಎಂದು ಕರೆಯಬೇಕಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಮಾತನಾಡಿದ ಅವರು, ಅಂದು ಕಾಂಗ್ರೆಸ್ ನಾಯಕ ಬರುತ್ತಾನೆಂದರೆ ಗೌರವ ಬರುತ್ತಿತ್ತು. ಈಗ ಕಾಂಗ್ರೆಸ್ ನಾಯಕ ಬರುತ್ತಾನೆಂದರೆ ಗೌರವ ಇಲ್ಲ. ಲೂಟಿ ಮಾಡಲೇ ಬರುತ್ತಾರೆ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಕಾಟಕ್ಕೆ ಅಪ್ಪಿಕೊಂಡಿದ್ದಾರೆ. ಭಾರತ್ ಜೋಡೋ ಯಾತ್ರೆ ಬಿಟ್ಟು ರಾಹುಲ್ ಓಡಿ ಹೋಗುತ್ತಿದ್ದಂತೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಎರಡು ದಿಕ್ಕಿಗೆ ಓಡಿ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.
ಮಂತ್ರಿ ಆಗಬೇಕೆಂಬ ಆಸೆ ನನಗೂ ಇದೆ. ಆದರೆ, ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿಲ್ಲ. ಬೇರೆ ಪಕ್ಷದಿಂದ ಬಂದವರ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ. ನನಗೆ ಸಚಿವ ಸ್ಥಾನ ನೀಡಿದರೆ ಇನ್ನೊಬ್ಬರಿಗೆ ಸಿಟ್ಟು ಬರುತ್ತದೆ. ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲು ತಯಾರಿ ಮಾಡಿಕೊಂಡಿದ್ದೇವೆ. ಆಗ ಬೇಡ ಎಂದರೂ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಈಶ್ವರಪ್ಪ ಹೇಳಿದ್ದಾರೆ.